ಚಂದ್ರಪುರ (ಮಹಾರಾಷ್ಟ್ರ): ಸಂಪೂರ್ಣ ಮಹಾರಾಷ್ಟ್ರದಲ್ಲಿರುವ ಹುಲಿಗಳ ಪೈಕಿ ಅರ್ಧಕ್ಕೂ ಹೆಚ್ಚು ಹುಲಿಗಳು ಚಂದ್ರಪುರ ಜಿಲ್ಲೆಯೊಂದರಲ್ಲಿಯೇ ಇವೆ. ಇಲ್ಲಿನ ತಾಡೋಬಾ-ಅಂಧಾರಿ ಹುಲಿ ಸಂರಕ್ಷಿತಾರಣ್ಯದಲ್ಲಿ ಹೆಚ್ಚೂ ಕಡಿಮೆ 150 ಹುಲಿಗಳಿವೆ. ಇನ್ನು ಜಿಲ್ಲೆಯ ಉಳಿದ ಭಾಗದ ಅರಣ್ಯದಲ್ಲಿ ಇನ್ನುಳಿದ 100 ಹುಲಿಗಳು ಆರಾಮವಾಗಿ ವಿಹರಿಸುತ್ತಿವೆ. ಹೀಗಾಗಿ ಚಂದ್ರಪುರ ಜಿಲ್ಲೆಯು ನಿಜವಾಗಿಯೂ ಹುಲಿಗಳ ಜಿಲ್ಲೆಯಾಗಿದೆ.
ಅತಿ ಹೆಚ್ಚು ಹುಲಿಗಳಿರುವ ಜಿಲ್ಲೆ ಇದು:ಗಢಚಿರೋಲಿ ಜಿಲ್ಲೆಯು ರಾಜ್ಯದಲ್ಲೇ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿದ ಜಿಲ್ಲೆಯಾಗಿದೆ. ಇದರ ನಂತರ ಬರುವುದೇ ಚಂದ್ರಪುರ ಜಿಲ್ಲೆ. ಚಂದ್ರಪುರ ಜಿಲ್ಲೆಯಲ್ಲಿನ ತಾಡೋಬಾ-ಅಂಧಾರಿ ಹುಲಿ ಸಂರಕ್ಷಿತಾರಣ್ಯ ರಾಜ್ಯದ ಅತಿದೊಡ್ಡ ಹುಲಿ ಸಂರಕ್ಷಿತಾರಣ್ಯವಾಗಿದೆ. ಸುಮಾರು 625 ಚದರ ಕಿಲೋಮೀಟರ್ಗಳಷ್ಟು ವ್ಯಾಪ್ತಿಯಲ್ಲಿ ಈ ಅರಣ್ಯ ವ್ಯಾಪಿಸಿಕೊಂಡಿದೆ.
ಬ್ರಹ್ಮಪುರಿ, ವರೋರಾ, ಸಾವಲಿ, ಸಿಂದೇವಾಹಿ ತಾಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳಿವೆ. ಹುಲಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಈ ತಾಲೂಕುಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಾರಕಕ್ಕೇರಿದೆ. ಈ ಸಂಘರ್ಷದಲ್ಲಿ ಒಂದೊಮ್ಮೆ ಮನುಷ್ಯರು ಪ್ರಾಣ ಕಳೆದುಕೊಂಡರೆ ಇನ್ನು ಕೆಲವೊಮ್ಮೆ ಹುಲಿಗಳು ಸಾಯುತ್ತವೆ.