ಚೆನ್ನೈ:ಪ್ರಾಣಿ, ಪಕ್ಷಿಗಳನ್ನು ನೋಂದಣಿ ಮಾಡಿಸದೇ ಸಾಕುವಂತಿಲ್ಲ. ಅಂತಹದರಲ್ಲಿ ಅವುಗಳನ್ನು ಮಾರಾಟಕ್ಕಿಟ್ಟರೆ ಬಿಟ್ಟಾರೆಯೇ?. ಮೂರು ತಿಂಗಳ ಎರಡು ಹುಲಿ ಮರಿಗಳು ಮಾರಾಟಕ್ಕಿವೆ. ಶೀಘ್ರವೇ ಸಂಪರ್ಕಿಸಿ ಎಂದು ವಾಟ್ಸ್ಆ್ಯಪ್ ಸ್ಟೇಟಸ್ ಇಟ್ಟಿದ್ದ ವ್ಯಕ್ತಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಕೆಲವು ದಿನಗಳಿಂದ ಚೆನ್ನೈ ಮತ್ತು ವೆಲ್ಲೂರಿನಲ್ಲಿ ಹುಲಿ ಮರಿಗಳು ಮಾರಾಟಕ್ಕಿವೆ ಎಂಬ ಅವುಗಳ ಫೋಟೋ ಇರುವ ವಾಟ್ಸ್ಆ್ಯಪ್ ಸ್ಟೇಟಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ವೆಲ್ಲೂರು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಪಾರ್ಥಿಬನ್ ಎಂಬಾತ ಸಿಕ್ಕಿ ಬಿದ್ದಿದ್ದಾನೆ.
ಮೂರು ತಿಂಗಳ ಹುಲಿ ಮರಿ ಮಾರಾಟಕ್ಕಿವೆ. ಬುಕಿಂಗ್ ಮಾಡಿದ 10 ದಿನಗಳಲ್ಲಿ ವಿತರಣೆ ಮಾಡಲಾಗುವುದು. ಈ ಹುಲಿ ಮರಿಗಳ ಬೆಲೆ 25 ಲಕ್ಷ ರೂಪಾಯಿಗಳು. ಬೇಕಾದವರು ಶೀಘ್ರವೇ ಸಂಪರ್ಕಿಸಿ ಎಂದು ಬಂಧಿತ ಆರೋಪಿ ತನ್ನ ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿಕೊಂಡಿದ್ದ. ಇದರ ಸ್ಕ್ರೀನ್ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.