ಧರ್ಮಶಾಲಾ (ಹಿಮಾಚಲ ಪ್ರದೇಶ) : ಚೀನಾ ದೇಶವು ಮಹಾತ್ಮ ಗಾಂಧಿಯಿಂದ ಬಹಳಷ್ಟು ಕಲಿಯಬೇಕಿದೆ ಎಂದು ಟಿಬೆಟ್‌ನ ಶಿಕ್ಷಣ ಮಂತ್ರಿ ಡೊಲ್ಮಾ ಥರ್ಲಾಮ್ ಅಭಿಪ್ರಾಯಪಟ್ಟರು. ಕೇಂದ್ರ ಟಿಬೆಟಿಯನ್ ಆಡಳಿತವು ಸೋಮವಾರ ಧರ್ಮಶಾಲಾದಲ್ಲಿ ಮಹಾತ್ಮ ಗಾಂಧಿಯವರ 154ನೇ ಜನ್ಮದಿನದ ಸಂದರ್ಭದಲ್ಲಿ ಅಧಿಕೃತ ಸಮಾರಂಭ ಆಯೋಜಿಸಿತ್ತು. ಟಿಬೆಟಿಯನ್ ಸರ್ಕಾರದ ಮಂತ್ರಿಗಳು ಮತ್ತು ಕೇಂದ್ರ ಟಿಬೆಟಿಯನ್ ಆಡಳಿತದ ಸಿಬ್ಬಂದಿ, ಉತ್ತರ ಭಾರತದ ಬೆಟ್ಟದ ಪಟ್ಟಣವಾದ ಧರ್ಮಶಾಲಾದಲ್ಲಿರುವ ಗಡಿಪಾರು ಸರ್ಕಾರದ ಪ್ರಧಾನ ಕಚೇರಿಯಲ್ಲಿರುವ ಗ್ಯಾಂಗ್ಕಿ ಪಾರ್ಕ್‌ನಲ್ಲಿ ಅವರು ಒಟ್ಟುಗೂಡಿದರು. ಮಹಾತ್ಮಾ ಗಾಂಧಿಯವರಿಗೆ ಗೌರವ ಸಲ್ಲಿಸಿ ಟಿಬೆಟ್‌ನಲ್ಲಿ ಶಾಂತಿಗಾಗಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಡೊಲ್ಮಾ ಥರ್ಲಾಮ್, ಮಹಾತ್ಮ ಗಾಂಧಿಯವರ ಅಹಿಂಸೆ ಮತ್ತು ಸತ್ಯದ ಮಾರ್ಗವನ್ನು ಕುರಿತು ಮಾತನಾಡಿದರು. ಗಾಂಧೀಜಿಯವರ ಆಲೋಚನೆಗಳು ಎಂದಿಗಿಂತಲೂ ಹೆಚ್ಚು ಪ್ರಸ್ತುತ ಎಂದರು. "ಗಾಂಧೀಜಿ ಅಹಿಂಸೆ ಮತ್ತು ಸತ್ಯದ ಮಾರ್ಗವನ್ನು ಅಳವಡಿಸಿಕೊಳ್ಳುವ ಮೂಲಕ ಬಹಳಷ್ಟು ಸಾಧನೆ ಮಾಡಿದ್ದಾರೆ. ನಾವು ನಮ್ಮ ದೇಶವನ್ನು ಹೇಗೆ ಮರಳಿ ಪಡೆಯಬಹುದು ಎಂಬುದಕ್ಕೆ ಇದು ಟಿಬೆಟಿಯನ್ನರಿಗೆ ಉತ್ತಮ ಉದಾಹರಣೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.
"ನಮಗೆ ಆಶಾದಾಯಕ ಸಮಯ ಬರುತ್ತದೆ. ಚೀನಾ ಖಂಡಿತವಾಗಿಯೂ ಕಲಿಯುತ್ತದೆ. ಅವರು ಯಾವುದೇ ದಬ್ಬಾಳಿಕೆಯ ದಮನಕಾರಿ ನೀತಿಗಳನ್ನು ಅಳವಡಿಸಿಕೊಂಡರೂ ಟಿಬೆಟಿಯನ್ ಮನೋಭಾವವನ್ನು ಸುಲಭವಾಗಿ ಕಡೆಗಣಿಸಲಾಗದು" ಎಂದರು.