ವಿದಿಶಾ(ಮಧ್ಯ ಪ್ರದೇಶ):ವಿದ್ಯಾರ್ಥಿಗಳ ಮತಾಂತರ ಆರೋಪ ಹಿನ್ನೆಲೆಯಲ್ಲಿ ಶಾಲಾ ಕಟ್ಟಡಕ್ಕೆ ಬಜರಂಗದಳ, ವಿಶ್ವ ಹಿಂದೂ ಪರಿಷತ್ ಮತ್ತು ಇತರ ಹಿಂದೂ ಸಂಘಟನೆಗಳ ನೂರಾರು ಕಾರ್ಯಕರ್ತರು ಕಲ್ಲು ತೂರಾಟ ನಡೆಸಿರುವ ಘಟನೆ ಮಧ್ಯಪ್ರದೇಶದ ವಿದಿಶಾದಲ್ಲಿ ಸೋಮವಾರ ಸಂಭವಿಸಿದೆ. ಘಟನೆ ಹಿನ್ನೆಲೆಯಲ್ಲಿ ಶಾಲಾ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ವಿದಿಶಾ ನಗರದಲ್ಲಿನ ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ 8 ಮಕ್ಕಳ ಮತಾಂತರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬಜರಂಗದಳ, ವಿಶ್ವ ಹಿಂದೂ ಪರಿಷತ್ ಮತ್ತು ಇತರ ಹಿಂದೂ ಸಂಘಟನೆಗಳ ಕಾರ್ಯಕರ್ತರು ಶಾಲಾ ಆವರಣಕ್ಕೆ ನುಗ್ಗಿ ಮನಬಂದಂತೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಿಂದ ಶಾಲಾ ಕಟ್ಟಡಕ್ಕೆ ಹಾನಿಯಾಗಿದೆ, ಶಾಲಾ ಆವರಣ ಮತ್ತು ಸುತ್ತಮುತ್ತಲಿನ ಬೋರ್ಡ್‌ಗಳನ್ನು ಪ್ರತಿಭಟನಾಕಾರರು ಧ್ವಂಸಗೊಳಿಸಿದ್ದಾರೆ. ಶಾಲೆ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಶಾಲೆಯಲ್ಲಿ ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲೇ ಈ ಗಲಾಟೆ ನಡೆದಿದ್ದು, ವಿದ್ಯಾರ್ಥಿಗಳು ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ವಿಧ್ವಂಸಕ ಕೃತ್ಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮೇಲಿನ ಮಹಡಿಯಲ್ಲಿರುವ ಪ್ರತ್ಯೇಕ ಕೊಠಡಿಗೆ ಸ್ಥಳಾಂತರಿಸಿ ಜಾಗರೂಕತೆ ವಹಿಸಲಾಗಿದೆ.