ತ್ರಿಶೂರ್ (ಕೇರಳ): ತನ್ನ ಹೆತ್ತ ತಂದೆ ಮತ್ತು ತಾಯಿಗೆ ಮಗಳೊಬ್ಬಳು ಇಲಿ ಪಾಷಾಣ ಬೆರೆಸಿದ ಚಹಾ ನೀಡಿರುವ ಆಘಾತಕಾರಿ ಪ್ರಕರಣ ಕೇರಳದ ತ್ರಿಶೂರ್ ಜಿಲ್ಲೆಯ ಕುನ್ನಂಕುಲಂನಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ ತಾಯಿ ಮೃತಪಟ್ಟರೆ, ಅದೃಷ್ಟವಶಾತ್ ತಂದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿ ಮಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇಂದುಲೇಖಾ ಎಂಬ ಮಹಿಳೆ ಈ ದುಷ್ಕೃತ್ಯ ಎಸಗಿದ್ದಾಳೆ. ತಾಯಿ ರುಕ್ಮಿಣಿ (57) ಮಗಳಿಂದ ಹತ್ಯೆಯಾದವರು. ಇಂದುಲೇಖಾ 8 ಲಕ್ಷ ರೂಪಾಯಿ ಸಾಲ ಹೊಂದಿದ್ದು, ಇದನ್ನು ತೀರಿಸಲು ತಂದೆ ಹೆಸರಲ್ಲಿದ್ದ ಮನೆ ಮತ್ತು ಜಮೀನನ್ನು ಒತ್ತೆಯಿಡಲು ಸಂಚು ರೂಪಿಸಿದ್ದಳು. ಇದಕ್ಕಾಗಿ ತಂದೆ ಚಂದ್ರನ್ ಮತ್ತು ತಾಯಿ ರುಕ್ಮಿಣಿ ಜೊತೆಗೆ ಮಗಳು ನಿತ್ಯವೂ ಜಗಳವಾಡುತ್ತಿದ್ದಳಂತೆ.
ಏನಾದರೂ ಮಾಡಿ ಆಸ್ತಿ ಪಡೆಯಬೇಕೆಂಬ ದುರುದ್ದೇಶ ಹೊಂದಿದ್ದ ಇಂದುಲೇಖಾ ಚಹಾದಲ್ಲಿ ತಂದೆ - ತಾಯಿಗೆ ಇಲಿ ಪಾಷಾಣ ಬೆರೆಸಿ ಕೊಟ್ಟಿದ್ದಾಳೆ. ಆದರೆ, ತಂದೆ ಚಂದ್ರನ್ ಚಹಾ ರುಚಿಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಅದನ್ನು ಕುಡಿದಿರಲಿಲ್ಲ. ತಾಯಿ ಚಹಾ ಸೇವಿಸಿ ತೀವ್ರ ಅಸ್ವಸ್ಥರಾಗಿದ್ದರು.