ಕರ್ನಾಟಕ

karnataka

ETV Bharat / bharat

ಸಂಚಾರ ನಿಯಮ ಉಲ್ಲಂಘನೆ ಆರೋಪ: ಕೇರಳ ವ್ಯಕ್ತಿಯಿಂದ ಪ್ರಧಾನಿ ವಿರುದ್ಧ ದೂರು - ಈಟಿವಿ ಭಾರತ ಕನ್ನಡ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೊಚ್ಚಿಯಲ್ಲಿ ನಡೆಸಿದ ರೋಡ್ ಶೋ ಸಂದರ್ಭದಲ್ಲಿ ಸಂಚಾರ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ತ್ರಿಶೂರಿನ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆ ಆರೋಪ: ಪ್ರಧಾನಿ ವಿರುದ್ಧ ದೂರು
Thrissur man lodges complaint against PM

By

Published : Apr 27, 2023, 5:14 PM IST

ತಿರುವನಂತಪುರಂ : ಕೇರಳದ ತ್ರಿಶೂರ್ ಪ್ರದೇಶದ ವ್ಯಕ್ತಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿನ ಕೊಚ್ಚಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತ್ರಿಶೂರ್ ಮೂಲದ ಜಯಕೃಷ್ಣನ್ ಅವರು ಬುಧವಾರ ಏಪ್ರಿಲ್ 24 ರಂದು ಕೊಚ್ಚಿಯಲ್ಲಿ ಪ್ರಧಾನಿ ನಡೆಸಿದ ರೋಡ್ ಶೋ ವೇಳೆ ಸಂಚಾರ ನಿಯಮ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ. ಕೇರಳ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅನಿಲ್ ಕಾಂತ್ ಮತ್ತು ಮೋಟಾರು ವಾಹನ ಇಲಾಖೆಗೆ ಅವರು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕಾರಿನ ವಿಂಡ್ ಶೀಲ್ಡ್ ಹೂವಿನ ದಳಗಳಿಂದ ಮುಚ್ಚಿದಾಗ, ಚಾಲಕನಿಗೆ ಮುಂದಿನ ರಸ್ತೆ ಸರಿಯಾಗಿ ಕಾಣದಿದ್ದರೂ ಅದಾವುದನ್ನೂ ಲೆಕ್ಕಿಸದ ಪ್ರಧಾನಿ ತಮ್ಮ ಅಧಿಕೃತ ವಾಹನದಿಂದ ಕೈ ಬೀಸುತ್ತಿದ್ದರು ಎಂದು ಜಯಕೃಷ್ಣನ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಹೀಗೆ ಮಾಡುವುದರ ಮೂಲಕ ಪ್ರಧಾನಿ ಚಾಲಕ ಹಾಗೂ ಇತರರ ಜೀವವನ್ನು ಅಪಾಯಕ್ಕೆ ಒಡ್ಡಿದ್ದಾರೆ. ಕಾನೂನು ಪಾಲಿಸಲು ಎಲ್ಲರೂ ಬದ್ಧರಾಗಿದ್ದು, ಎಲ್ಲರೂ ಅದನ್ನು ಪಾಲಿಸಬೇಕು ಎಂದು ಜಯಕೃಷ್ಣನ್ ದೂರಿನಲ್ಲಿ ತಿಳಿಸಿದ್ದಾರೆ.

'ಯುವಂ' ಹೆಸರಿನ ಯುವಕರೊಂದಿಗೆ ಸಂವಾದ ಕಾರ್ಯಕ್ರಮ, ವಂದೇ ಭಾರತ್ ರೈಲು ಸೇವೆಯ ಉದ್ಘಾಟನೆ, ಕೊಚ್ಚಿ ವಾಟರ್ ಮೆಟ್ರೋ, ಡಿಜಿಟಲ್ ಸೈನ್ಸ್ ಪಾರ್ಕ್ ಮುಂತಾದ ವಿವಿಧ ಅಭಿವೃದ್ಧಿ ಕೆಲಸಗಳನ್ನು ಉದ್ಘಾಟಿಸಲು ಪ್ರಧಾನ ಮಂತ್ರಿ ಏ. 24 ರಂದು ಕೊಚ್ಚಿಗೆ ಆಗಮಿಸಿದ್ದರು. ‘ಯುವಂ’ ಕಾರ್ಯಕ್ರಮಕ್ಕೂ ಮುನ್ನ ಕೊಚ್ಚಿಯಲ್ಲಿ ಮೋದಿಯವರ ರೋಡ್‌ಶೋ ನಡೆದಿತ್ತು. ರೋಡ್ ಶೋ ವೇಳೆ ಪ್ರಧಾನಿಯವರು ತಮ್ಮ ಅಧಿಕೃತ ವಾಹನದ ಮುಂಭಾಗದ ಸೀಟಿನಲ್ಲಿ ಬಾಗಿಲು ತೆರೆದು ನೇತಾಡುತ್ತ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರಿಗೆ ಕೈಬೀಸುತ್ತಿದ್ದರು. ಪ್ರಧಾನಿ ಕೊಚ್ಚಿಯಲ್ಲಿ 1.8 ಕಿಮೀ ರೋಡ್ ಶೋ ನಡೆಸಿದರು. ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಮೋದಿಯವರನ್ನು ನೋಡಲು ಭಾರೀ ಜನಸ್ತೋಮವೇ ನೆರೆದಿತ್ತು. ಮರುದಿನ ಏ. 25ರಂದು ತಿರುವನಂತಪುರಂನಲ್ಲಿ ಕೂಡ ಪ್ರಧಾನಿ ರೋಡ್‌ಶೋ ನಡೆಸಿದರು.

ಕ್ವಾಡ್​ ಶೃಂಗದಲ್ಲಿ ಪ್ರಧಾನಿ ಮೋದಿ ಭಾಗಿ: ಮೇ 24 ರಂದು ಸಿಡ್ನಿಯಲ್ಲಿ ನಡೆಯಲಿರುವ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಸಿಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್​ ಮತ್ತು ಆಸ್ಟ್ರೇಲಿಯಾ ಮತ್ತು ಜಪಾನ್‌ ಪ್ರಧಾನಿಗಳು ಸಹ ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ. ಉಕ್ರೇನ್ ಸಂಘರ್ಷದ ಪರಿಣಾಮಗಳು ಮತ್ತು ಭಾರತದಲ್ಲಿನ ಒಟ್ಟಾರೆ ಪರಿಸ್ಥಿತಿ ಮೇಲೆ ಕೇಂದ್ರೀಕರಿಸಿ ಚರ್ಚೆ ನಡೆಯುವ ನಿರೀಕ್ಷೆಯಿದೆ. ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುವ ಮೊದಲು, ಪ್ರಧಾನಿ ಮೋದಿ ಅವರು ಮೇ 19 ರಿಂದ 21 ರವರೆಗೆ ನಡೆಯಲಿರುವ ಗ್ರೂಪ್ ಆಫ್ ಸೆವೆನ್ (ಜಿ7) ಸುಧಾರಿತ ಆರ್ಥಿಕತೆಯ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಜಪಾನಿನ ಹಿರೋಶಿಮಾ ನಗರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ತಿಂಗಳು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಜಿ7 ಶೃಂಗಸಭೆಗೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ್ದರು.

ಇದನ್ನೂ ಓದಿ : ಕರೆಂಟಿರಲಿಲ್ಲ, ನೀರಿರಲಿಲ್ಲ.. ಹೇಗೋ ಬದುಕಿದ್ದೆವು: ಸುಡಾನ್​ನಿಂದ ಬಂದವರ ಮಾತು

ABOUT THE AUTHOR

...view details