ಚೆನ್ನೈ: ತಮಿಳುನಾಡಿನ ಕುಂಭಕೋಣಂ ದೇವಾಲಯದಿಂದ ಕಳುವು ಮಾಡಲಾದ ಪುರಾತನ ಕಾಳಿಂಗನರ್ತನ ಕೃಷ್ಣನ ಮೂರ್ತಿ ಸೇರಿದಂತೆ ಮೂರು ಪುರಾತನ ವಿಗ್ರಹಗಳು ಅಮೆರಿಕದ ಮ್ಯೂಸಿಯಂ ಅಥವಾ ಹರಾಜು ಕಂಪನಿಗಳಲ್ಲಿ ಪತ್ತೆಯಾಗಿವೆ ಎಂದು ತಮಿಳುನಾಡು ಸಿಐಡಿಯ ವಿಗ್ರಹ ತನಿಖಾ ವಿಭಾಗ ತಿಳಿಸಿದೆ.
ಕುಂಭಕೋಣಂನ ಸುಂದರ ಪೆರುಮಾಳ್ಕೋವಿಲ್ ಗ್ರಾಮದ ಅರುಲ್ಮಿಗು ಸೌಂದರರಾಜ ಪೆರುಮಾಳ್ ದೇವಸ್ಥಾನದಿಂದ ಕಾಳಿಂಗನರ್ತನ ಕೃಷ್ಣ, ವಿಷ್ಣು ಮತ್ತು ಶ್ರೀದೇವಿಯ ಕಂಚಿನ ವಿಗ್ರಹಗಳನ್ನು ಕಳವು ಮಾಡಲಾಗಿದೆ ಎಂದು ಅದು ಹೇಳಿದೆ.
ಸುಮಾರು 60 ವರ್ಷಗಳ ಹಿಂದೆ ದೇವಾಲಯದಲ್ಲಿನ ಕಾಳಿಂಗ ನರ್ತನ ಕೃಷ್ಣ, ವಿಷ್ಣು ಮತ್ತು ಶ್ರೀದೇವಿಯ ವಿಗ್ರಹಗಳನ್ನು ನಕಲಿ ವಿಗ್ರಹಗಳೊಂದಿಗೆ ಬದಲಾಯಿಸಲಾಗಿತ್ತು ಮತ್ತು ಇದು ಇಷ್ಟು ವರ್ಷಗಳಲ್ಲಿ ಯಾರ ಗಮನಕ್ಕೂ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಗ್ರಹಗಳು ಅಮೆರಿಕದ ವಸ್ತುಸಂಗ್ರಹಾಲಯ ಅಥವಾ ಹರಾಜು ಕಂಪನಿಗಳಲ್ಲಿವೆ ಎಂದು ತನಿಖೆಯಿಂದ ದೃಢಪಟ್ಟಿದೆ. ಸೌಂದರರಾಜ ಪೆರುಮಾಳ್ ದೇವಸ್ಥಾನದ ಪುರಾತನ ಮೂರ್ತಿಗಳನ್ನು ಮರುಪ್ರತಿಷ್ಠಾಪಿಸಲು ಮೂರೂ ವಿಗ್ರಹಗಳನ್ನು ತಮಿಳುನಾಡಿಗೆ ಹಿಂದಿರುಗಿಸುವಂತೆ ಕೋರಿ ಸಿಐಡಿ ಪತ್ರ ಬರೆದಿದೆ ಎಂದು ವಿಗ್ರಹ ತನಿಖಾ ವಿಭಾಗದ ಡಿಜಿಪಿ ಕೆ. ಜಯಂತ್ ಮುರಳಿ ತಿಳಿಸಿದ್ದಾರೆ.