ಆಂಧ್ರಪ್ರದೇಶ/ಬೆಂಗಳೂರು:ಗಾಂಜಾ ಆರೋಪಿಗಳನ್ನು ಸೆರೆ ಹಿಡಿಯಲು ತೆರಳುತ್ತಿದ್ದ ಬೆಂಗಳೂರಿನ ಮೂವರು ಪೊಲೀಸ್ ಸಿಬ್ಬಂದಿ ಆಂಧ್ರಪ್ರದೇಶದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಶಿವಾಜಿನಗರ ಠಾಣೆಯ ಪಿಎಸ್ಐ ಅವಿನಾಶ್, ಕಾನ್ಸ್ಟೇಬಲ್ ಅನಿಲ್ ಮುಲಿಕ್ ಹಾಗೂ ಕಾರು ಚಾಲಕ ಮೃತಪಟ್ಟವರೆಂದು ತಿಳಿದುಬಂದಿದೆ.
ಭಾನುವಾರ ಮುಂಜಾನೆ ಚಿತ್ತೂರು ಬಳಿ ಇನ್ನೋವಾ ಕಾರು ರಸ್ತೆ ಡಿವೈಡರ್ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಮೂವರೂ ಸಿಬ್ಬಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡರೆ, ಇಬ್ಬರಿಗೆ ಗಂಭೀರ ಗಾಯಗಳಾಗಿದೆ. ಪ್ರೊಬೆಷನರಿ ಪಿಎಸ್ಐ ದೀಕ್ಷಿತ್, ಕಾನ್ಸ್ಟೇಬಲ್ ಶರಣಬಸವ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ತಮಿಳುನಾಡಿನ ಸಿಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪಿಎಸ್ಐ ಅವಿನಾಶ್ ನೇತೃತ್ವದಲ್ಲಿ ಪೊಲೀಸ್ ತಂಡ ಆಂಧ್ರಕ್ಕೆ ತೆರಳಿತ್ತು. ನಿನ್ನೆ ಬೆಂಗಳೂರಿನಿಂದ ಗಾಂಜಾ ಆರೋಪಿಗಳನ್ನು ಬೆನ್ನತ್ತಿ ತೆರಳಿದ್ದ ಸಿಬ್ಬಂದಿ, ಚಿತ್ತೂರಿನಿಂದ ತಿರುಪತಿಯತ್ತ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಅಪಘಾತದ ಬಗ್ಗೆ ಮಾಹಿತಿ ಕಲೆ ಹಾಕಿರುವ ಬೆಂಗಳೂರು ಪೊಲೀಸರು, ಸ್ಥಳಕ್ಕೆ ತೆರಳಿದ್ದಾರೆ.