ಕರ್ನಾಲ್ (ಹರಿಯಾಣ) : ಜಮೀನು ವಿವಾದ ಸಂಬಂಧ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದ್ದು ಘಟನೆಯಲ್ಲಿ ವ್ಯಕ್ತಿಯೊಬ್ಬ ಮೂವರನ್ನು ಗುಂಡಿಕ್ಕಿ ಕೊಂದಿದ್ದಾನೆ. ಹರಿಯಾಣದ ಘರೌಂಡಾ ವಿಧಾನಸಭೆಯ ಗಗಸಿನಾ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಈ ಘಟನೆ ನಡೆದಿದೆ.
ಭೂಮಿ ವಿಷಯವಾಗಿ ಖಾನ್ ಕುನ್ಬಾ ಮತ್ತು ಕೃಷ್ಣ ಕುನ್ಬಾ ಎಂಬ ಇಬ್ಬರ ನಡುವೆ ಜಗಳ ನಡೆದಿದ್ದು, ಜಗಳ ವಿಕೋಪಕ್ಕೆ ಹೋಗಿದ್ದರಿಂದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.
ಸಿಟ್ಟಿನ ಭರದಲ್ಲಿ ಖಾನ್ ಕುನ್ಬಾ ಪೊಲೀಸರ ಮುಂದೆಯೇ ಕೃಷ್ಣ ಕುನ್ಬಾ ಕಡೆಯ ಮೂವರು ವ್ಯಕ್ತಿಗಳಿಗೆ ಗುಂಡು ಹಾರಿಸಿದ್ದಾನೆ. ಗುಂಡೇಟು ತಿಂದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.
ಜಮೀನು ವಿವಾದ ಸಂಬಂಧ ಎರಡು ಕುಟುಂಬಗಳ ನಡುವೆ ಮಾರಾಮಾರಿ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗದಿರುವುದರಿಂದ ಈ ಸಾವುಗಳು ಸಂಭವಿಸಿವೆ ಎನ್ನಲಾಗುತ್ತಿದೆ.
ಪೊಲೀಸರು ಕ್ರಮ ತೆಗೆದುಕೊಳ್ಳುವ ಬದಲು ಆರೋಪಿ ಕಡೆಯವರಿಗೆ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿ ಕೃಷ್ಣ ಕುನ್ಬಾ ಹಾಗೂ ಈತನ ಸಂಬಂಧಿಕರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದಾರೆ.