ಡಿಯೋರಿಯಾ (ಉತ್ತರಪ್ರದೇಶ):ಶುಕ್ರವಾರ ಬೆಳ್ಳಂಬೆಳಗ್ಗೆ ಡಿಯೋರಿಯಾದಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಅನಿಯಂತ್ರಿತ ಕಂಟೈನರ್ವೊಂದು ಮನೆಯೊಳಗೆ ನುಗ್ಗಿದ್ದು, ಮೂವರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಈ ಅಪಘಾತದಲ್ಲಿ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗ್ಗೆ ದಟ್ಟ ಮಂಜಿನಿಂದಾಗಿ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಯೋರಿಯಾದಲ್ಲಿ ಅತೀ ಹೆಚ್ಚು ಚಳಿ ಇದ್ದು, ಇಲ್ಲಿನ ಕೆಲವರು ಬೆಳಗ್ಗೆ ಮೈ ಕಾಯಿಸಿಕೊಳ್ಳಲು ರಸ್ತೆ ಬದಿ ಮತ್ತು ಮನೆ ಮುಂದೆ ಬೆಂಕಿ ಹಚ್ಚುತ್ತಾರೆ. ಇಂದು ಬೆಳಗ್ಗೆ ರಸ್ತೆಬದಿಯಲ್ಲಿ ಕೆಲವರು ಬೆಂಕಿ ಹಚ್ಚಿ ಮೈ ಬೆಚ್ಚನೆ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಮಂಜಿನಿಂದಾಗಿ ಕಂಟೈನರ್ವೊಂದು ಇವರ ಮೇಲೆ ಹರಿದಿದ್ದು, ರಸ್ತೆ ಬದಿಯ ಮನೆಯೊಂದಕ್ಕೆ ನುಗ್ಗಿದೆ.
ಮದನ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಾರಾವ್ ಇಂಟರ್‌ಸೆಕ್ಷನ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಬಗ್ಗೆ ಮಾತನಾಡಿದ ಡಿಯೋರಿಯಾ ಪೊಲೀಸ್ ವರಿಷ್ಠಾಧಿಕಾರಿ ಸಂಕಲ್ಪ್ ಶರ್ಮಾ, ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದರು.
ಘಟನೆಯ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನಾ ಸ್ಥಳಕ್ಕೆ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟ್ರಕ್ ರಸ್ತೆಬದಿಯಲ್ಲಿ ನಿಂತಿದ್ದ ಮೂವರ ಮೇಲೆ ಹರಿದಿದೆ. ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಾಗಿದ್ದು, ಚಾಲಕನನ್ನು ಬಂಧಿಸಲಾಗಿದೆ ಎಂದು ಡಿಯೋರಿಯಾ ಪೊಲೀಸ್ ವರಿಷ್ಠಾಧಿಕಾರಿ ಸಂಕಲ್ಪ್ ಶರ್ಮಾ ಮಾಹಿತಿ ನೀಡಿದರು.