ಕೋಲ್ಕತ್ತಾ(ಪಶ್ಚಿಮ ಬಂಗಾಳ): ಕೋಲ್ಕತ್ತಾದ ರೀಜೆಂಟ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬಾಡಿಗೆ ಅಪಾರ್ಟ್ಮೆಂಟ್ ಫ್ಲಾಟ್‌ನಲ್ಲಿ ಚಿನ್ನದ ವ್ಯಾಪಾರಿ ದಂಪತಿ ಮತ್ತು ಅವರ ಮಗಳ ಕೊಳೆತ ಶವಗಳು ಭಾನುವಾರ ಪತ್ತೆಯಾಗಿವೆ. ಫ್ಲಾಟ್‌ನಲ್ಲಿ ದುರ್ವಾಸನೆ ಬರುತ್ತಿದ್ದರಿಂದ ಪಕ್ಕದ ಫ್ಲಾಟ್‌ನವರು ಅಪಾರ್ಟ್ಮೆಂಟ್ ಮಾಲೀಕರಿಗೆ ವಿಷಯ ತಿಳಿಸಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಂದ ಪೊಲೀಸರು ಪರಿಶೀಲನೆ ನಡೆಸಿ ಮೂರು ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
7 ತಿಂಗಳ ಹಿಂದೆ ಅಪಾರ್ಟ್ಮೆಂಟ್ಗೆ ಸ್ಥಳಾಂತರವಾಗಿದ್ದ ಕುಟುಂಬ: ಪ್ರಾಥಮಿಕ ತನಿಖೆ ನಂತರ ಪೊಲೀಸರು, ಈ ಮೂವರು ಕೂಡ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಥವಾ ಬೇರೇನಾದರು ನಡೆದಿರಬಹುದೇ ಎಂದು ತನಿಖೆ ನಡೆಸುತ್ತಿದ್ದಾರೆ. ಇನ್ನು, ಅಪಾರ್ಟ್ಮೆಂಟ್ ಮಾಲೀಕ ಈ ಕುಟುಂಬದವರು ಏಳು ತಿಂಗಳಿನ ಹಿಂದೆ ಶಿಫ್ಟಾಗಿದ್ದರು. ಇವರಿಗೆ ಆರ್ಥಿಕ ಸಂಕಷ್ಟವಿತ್ತು. ಅವರಿಗೆ, ಬಾಡಿಗೆ ಮತ್ತು ವಿದ್ಯುತ್ ಬಿಲ್ ಕೂಡ ಪಾವತಿಸಲು ಅಸಾಧ್ಯವಾಗಿತ್ತು ಎಂದು ಹೇಳಿಕೆ ನೀಡಿದ್ದಾರೆ.
ಕರೆ ಸ್ವೀಕರಿಸದೇ ಇದ್ದದ್ದು ಕಂಡು ಅನುಮಾನ: ಈ ಪ್ರಕರಣಕ್ಕೆ ಸಂಬಂಧಪಟ್ಟ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿ, ಶನಿವಾರ ರಾತ್ರಿ ಫ್ಲಾಟ್ನಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ನೆರೆಹೊರೆ ನಿವಾಸಿಗಳು ಸಂಬಂಧಪಟ್ಟ ಮನೆಯ ಮಾಲೀಕರಿಗೆ ತಿಳಿಸಿದ್ದಾರೆ. ಹೀಗಾಗಿ ಮಾಲೀಕ ಜಯಂತ್ ಮೊಂಡಲ್ ಆ ಕುಟುಂಬದವರ ಫ್ಲಾಟ್ಗೆ ಹೋಗಿ ಅವರಿಗೆ ಕರೆ ಮಾಡಿದ್ದಾರೆ. ಆದರೆ ಯಾರು ಕರೆ ಸ್ವೀಕರಿಸದ ಹಿನ್ನೆಲೆ ಜಯಂತ್ ರಿಜೆಂಟ್ ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಬಾಗಿಲು ಒಡೆದು ದಂಪತಿಯ ಶವವನ್ನು ಊಟದ ಕೋಣೆಯಿಂದ ಮತ್ತು ಮಗಳ ಮೃತದೇಹವನ್ನು ಮಲಗುವ ಕೋಣೆಯಿಂದ ಹೊರತೆಗೆದರು ಎಂದು ಹೇಳಿದ್ದಾರೆ.