ಪುರಿ, ಒಡಿಶಾ: ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕೇವಲ ಮೂರು ದಿನಗಳಲ್ಲಿ ಮೂವರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಮತ್ತು ಅತ್ಯಾಚಾರ ಯತ್ನದಂತಹ ಪ್ರಕರಣಗಳು ಒಡಿಶಾದ ಪುರಿ ಮತ್ತು ಹಲವೆಡೆ ಬೆಳಕಿಗೆ ಬಂದಿವೆ.
ಮೊದಲ ಪ್ರಕರಣದಲ್ಲಿ ಎರಡು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ ಆಕೆಯ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಪುರಿ ಜಿಲ್ಲೆಯ ಸೀ ಬೀಚ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗುವಿನ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಕಳೆದ ವರ್ಷ ಈ ವ್ಯಕ್ತಿ ತನ್ನ ಪತ್ನಿ ಮತ್ತು ಮಕ್ಕಳ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ 8 ತಿಂಗಳ ಕಾಲ ಜೈಲಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕನ್ ಸಾಂಬಾರ್ ಆಮಿಷವೊಡ್ಡಿ ಅತ್ಯಾಚಾರ: ಎರಡನೇ ಪ್ರಕರಣದ ಬಲಿಪಂಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಮಂಗಳವಾರ ಐದು ವರ್ಷದ ನೆರೆಮನೆಯ ಬಾಲಕಿಯ ಮೇಲೆ ಅತ್ಯಾಚಾರದ ಆರೋಪದ ಮೇಲೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಚಿಕನ್ ಸಾಂಬಾರ್ ಕೊಡುವುದಾಗಿ ತನ್ನ ಮನೆಗೆ ಕರೆದೊಯ್ದು, ಆರೋಪಿ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿಯ ತಾಯಿ ಆರೋಪಿಸಿದ್ದಾಳೆ.
ಅತ್ಯಾಚಾರಕ್ಕೆ ಒಳಗಾದ ಬಾಲಕಿಗೆ ಕಟಕ್ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಬಾಲಕಿಯ ಸ್ಥಿತಿ ಗಂಭೀರವಾಗಿದೆ. ಆರೋಪಿ ಪರಾರಿಯಾಗಿದ್ದು, ಆತನನ್ನು ಬಂಧಿಸಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣ ಪುರಿ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.