ಕರ್ನಾಟಕ

karnataka

ETV Bharat / bharat

ರಾಜಕೀಯ ವೈಷಮ್ಯ: ಒಂದೇ ಕುಟುಂಬದ ಮೂವರ ಗುಂಡಿಕ್ಕಿ ಹತ್ಯೆ

ಗ್ರಾಮ ಪಂಚಾಯತ್‌ ಚುನಾವಣೆಯ ಜಿದ್ದಾಜಿದ್ದಿ ಮಧ್ಯಪ್ರದೇಶದಲ್ಲಿ ಮೂವರ ಪ್ರಾಣ ತೆಗೆದಿದೆ.

investigation by police
ಪೊಲೀಸರಿಂದ ತನಿಖೆ

By

Published : Jan 16, 2023, 6:43 AM IST

ಭಿಂಡ್ (ಮಧ್ಯಪ್ರದೇಶ): ಇಲ್ಲಿನ ಭಿಂಡ್ ಜಿಲ್ಲೆಯ ಪಚೇರಾ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಇತ್ತೀಚೆಗೆ ನಡೆದಿದ್ದ ಗ್ರಾ.ಪಂ ಚುನಾವಣೆಯಲ್ಲಿ ಹಕೀಮ್, ಗೋಲು ಮತ್ತು ಪಿಂಕು ಎಂಬವರನ್ನು ಮಾಜಿ ಸರಪಂಚ್ ನಿಶಾಂತ್ ತ್ಯಾಗಿ ಅವರ ಅಭ್ಯರ್ಥಿಗಳು ಸೋಲಿಸಿದ್ದರು. ಇದು ಉಭಯ ಪಕ್ಷಗಳ ನಡುವೆ ದ್ವೇಷ ಉಂಟು ಮಾಡಿತ್ತು. ಇದೇ ವಿಚಾರಕ್ಕೆ ಭಾನುವಾರ ಹಕೀಮ್, ಗೋಲು ಮತ್ತು ಪಿಂಕು ಮೂವರು ತಮ್ಮ ಜಮೀನಿನ ಕಡೆಗೆ ಹೊರಟಿದ್ದಾಗ ನಿಶಾಂತ್ ತ್ಯಾಗಿ ಕುಟುಂಬ ಸದಸ್ಯರು ಅವರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.

ತೀವ್ರವಾಗಿ ಗಾಯಗೊಂಡಿದ್ದ ಮೂವರನ್ನು ಅವರ ಕುಟುಂಬ ಸದಸ್ಯರು ಹತ್ತಿರದ ಮೆಹಗಾಂವ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲೇ ಮೂವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮೆಹಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳ ಪರಿಶೀಲಿಸಿ, ತನಿಖೆ ಕೈಗೊಂಡಿದ್ದಾರೆ.

ಎಸ್‌ಪಿ ಶೈಲೇಂದ್ರ ಸಿಂಗ್ ಚೌಹಾಣ್ ಮಾತನಾಡಿ, ಗ್ರಾ.ಪಂ ಚುನಾವಣೆ ನಂತರ ಹಳೆ ದ್ವೇಷದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಗುಂಡಿನ ದಾಳಿ ನಡೆದಿದೆ. ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪತ್ತೆಗೆ ವಿಶೇಷ ತಂಡ ರಚಿಸಿದ್ದು, ಶೀಘ್ರದಲ್ಲಿ ಬಂಧಿಸಲಾಗುವುದು ಎಂದರು.

ಗ್ರಾ.ಪಂ ಚುನಾವಣೆಯಲ್ಲಿ ಸೋಲಿನ ವಿಚಾರಕ್ಕೆ ಸಂಬಂಧಿಸಿದಂತೆ ಉಭಯ ಪಕ್ಷಗಳ ನಡುವೆ ಶನಿವಾರ ವಾಗ್ವಾದ ನಡೆದಿತ್ತು. ಭಾನುವಾರ ಬೆಳಗ್ಗೆ ಮಾಜಿ ಸರಪಂಚ್ ನಿಶಾಂತ್ ತ್ಯಾಗಿ ಹಾಗೂ ಅವರ ಕುಟುಂಬದ 12 ಸದಸ್ಯರಿರುವ ತಂಡವು ತಮ್ಮ ಜಮೀನಿಗೆ ಹೋಗುತ್ತಿದ್ದ ಹಕೀಂ, ಗೋಲು ಮತ್ತು ಪಿಂಕು ಅವರನ್ನು ಸುತ್ತುವರಿದು ಗುಂಡು ಹಾರಿಸಿದೆ. ಘಟನೆಯಿಂದ ಗಾಯಗೊಂಡ ಮೂವರನ್ನು ಮೆಹಗಾಂವ್ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ. ಪಚೇರಾ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಭಯದಿಂದ ಜನರು ತಿರುಗಾಡುತ್ತಿದ್ದು, ಸಾಕ್ಷ್ಯ ಹೇಳಲೂ ಜನರು ಹೆದರುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಹೇಳಿದರು.

ಭಿಂಡ್ ಜಿಲ್ಲೆಯ ಪಚೇರಾ ಗ್ರಾಮದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ. ಸಂತ್ರಸ್ತ ಕುಟುಂಬಕ್ಕೂ ಪೊಲೀಸರು ರಕ್ಷಣೆ ಒದಗಿಸಿದ್ದಾರೆ. ಎಸ್ಪಿ, ಎಎಸ್ಪಿ ಸೇರಿದಂತೆ ಉನ್ನತ ಅಧಿಕಾರಿಗಳು ಸ್ಥಳದಲ್ಲಿದ್ದು, ಊರು ಸುತ್ತುವರಿದು ಭದ್ರತೆ ಕಲ್ಪಿಸಿದ್ದಾರೆ.

ಇದನ್ನೂಓದಿ:72 ಜನರಿದ್ದ ನೇಪಾಳ ವಿಮಾನ ಪತನ: 68 ಮೃತದೇಹ ಪತ್ತೆ

ABOUT THE AUTHOR

...view details