ಆಗ್ರಾ (ಉತ್ತರ ಪ್ರದೇಶ):ಪಾಕಿಸ್ತಾನ ವಿರುದ್ಧ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಸೋತ ನಂತರ ಸಂಭ್ರಮಾಚರಣೆ ಮಾಡಿದ ಆಗ್ರಾದ ಇಂಜಿನಿಯರಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಲಾಗಿದೆ.
ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡ ಆರೋಪದ ಮೇಲೆ ಬಿಜೆಪಿ ಯುವ ಘಟಕದ ಮುಖಂಡರೊಬ್ಬರು ದೂರು ದಾಖಲಿಸಿದ್ದಾರೆ. ಬಿಜೆಪಿ ಯುವ ಮುಖಂಡ ಗೌರವ್ ರಾಜಾವತ್ ನೀಡಿರುವ ದೂರಿನ ಆಧಾರದ ಮೇಲೆ ಜಗದೀಶ್‌ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಆಗ್ರಾ ಎಸ್‌ಪಿ ವಿಕಾಸ್ ಕುಮಾರ್ ತಿಳಿಸಿದ್ದು, ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಪಾಕಿಸ್ತಾನ ತಂಡ ಗೆಲುವು ಸಾಧಿಸಿದ ಬಳಿಕ ಕೆಲವರು ವಾಟ್ಸ್‌ಆ್ಯಪ್‌ನಲ್ಲಿ ದೇಶವಿರೋಧಿ ಸಂದೇಶಗಳನ್ನು ಬರೆದು ಹಂಚಿಕೊಂಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಈಗಾಗಲೇ ಸಿವಿಲ್ ಇಂಜಿನಿಯರಿಂಗ್ ಕೋರ್ಸ್ ಮಾಡುತ್ತಿದ್ದ ಮೂವರೂ ವಿದ್ಯಾರ್ಥಿಗಳನ್ನು ಹಾಸ್ಟೆಲ್ ಹಾಗೂ ಸಂಸ್ಥೆಯಿಂದ ಕಾಲೇಜು ಆಡಳಿತ ಮಂಡಳಿ ಅಮಾನತುಗೊಳಿಸಿದೆ.