ವಿದಿಶಾ(ಮಧ್ಯಪ್ರದೇಶ): ಭೋಪಾಲ್ - ವಿದಿಶಾ ರಸ್ತೆಯ ಲಂಬಖೇಡಾ ಬಳಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ತಡರಾತ್ರಿ ವಿದಿಶಾ ಪ್ರೆಸ್ ಕ್ಲಬ್ ಅಧ್ಯಕ್ಷ ರಾಜೇಶ್ ಶರ್ಮಾ ಮತ್ತು ಅವರ ಪತ್ರಕರ್ತ ಸಹೋದ್ಯೋಗಿಗಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಲಾಮತ್‌ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅಪಘಾತಕ್ಕೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ಸರ್ಕಾರದ ಪರವಾಗಿ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ತನಿಖಾಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಮೂವರು ವ್ಯಕ್ತಿಗಳು ಸೋಮವಾರ ರಾತ್ರಿ ಭೋಪಾಲ್‌ನಿಂದ ವಿದಿಶಾಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಲಂಬಖೇಡ ತಿರುವಿನಲ್ಲಿ ಬೈಕ್‌ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಈ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಕೆಳಗೆ ಬಿದಿದ್ದೆ, ಬಿದ್ದ ರಭಸಕ್ಕೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರೂ ವೃತ್ತಿಯಲ್ಲಿ ಪತ್ರಕರ್ತರಾಗಿದ್ದರು. ಅಪರಿಚಿತ ವಾಹನ ಪತ್ತೆ ಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಪಘಾತದ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಟ್ವಿಟರ್‌ನಲ್ಲಿ, “ವಿದಿಶಾ ಪ್ರೆಸ್ ಕ್ಲಬ್ ಅಧ್ಯಕ್ಷ ರಾಜೇಶ್ ಶರ್ಮಾ ಮತ್ತು ಸಹ ಪತ್ರಕರ್ತರಾದ ಸುನೀಲ್ ಶರ್ಮಾ ಮತ್ತು ನರೇಂದ್ರ ದೀಕ್ಷಿತ್ ಅಪಘಾತದಲ್ಲಿ ನಿಧನರಾದ ದುಃಖದ ಸುದ್ದಿಯನ್ನು ಕೇಳಿ ಆಘಾತವಾಯಿತು. ಅವರ ಕುಟುಂಬದ ಸದಸ್ಯರು ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ಅವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ . ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.