ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಬುಧವಾರ ಸಂಭವಿಸಿದ ನೆಲಬಾಂಬ್ ಸ್ಫೋಟದಲ್ಲಿ ಮೂವರು ಸೇನಾ ಸಿಬ್ಬಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ವೈಶ್ರೀ ರಾಮುಲ್ಲು, ವಿಮಲ್ ರಾಜ್ ಮತ್ತು ವೀರ್ ಭರಪ್ಪ ಗಾಯಗೊಂಡ ಸೈನಿಕರು. ಸೇನಾ ಸಿಬ್ಬಂದಿ ಮೆಂಧರ್ ಸೆಕ್ಟರ್‌ನ ಫಗ್ವಾರಿ ಗಲಿ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ಈ ನೆಲಬಾಂಬ್ ಸ್ಫೋಟಗೊಂಡಿರುವುದು ಪ್ರಾಥಮಿಕ ವರದಿಯಿಂದ ಗೊತ್ತಾಗಿದೆ. ತಕ್ಷಣ ಗಾಯಗೊಂಡ ಮೂವರು ಸೈನಿಕರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಇಬ್ಬರಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯವಾಗಿದ್ದರಿಂದ ಅವರನ್ನು ರಜೌರಿಯ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ ಎಂದು ಹಿರಿಯ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಒಳನುಸುಳುವಿಕೆ ನಿಗ್ರಹ ಕಾರ್ಯತಂತ್ರದ ಭಾಗವಾಗಿ, ಸೇನೆಯು ಈ ಭಾಗಕ್ಕೆ ಶಸ್ತ್ರಸಜ್ಜಿತ ಭಯೋತ್ಪಾದಕರನ್ನು ಪ್ರವೇಶಿಸದಂತೆ ತಡೆಯಲು ಸಂಭವನೀಯ ಒಳನುಸುಳುವಿಕೆ ಮಾರ್ಗಗಳನ್ನು ಪ್ಲಗ್ ಮಾಡಲು ಈ ನೆಲಬಾಂಬ್ಗಳನ್ನು ಬಳಸುತ್ತಿದೆ. ಆದರೆ, ಕೆಲವೊಮ್ಮೆ ಮಳೆಯಿಂದಾಗಿ ಸ್ಫೋಟಕ ಸಾಧನಗಳು ಸ್ಥಳಾಂತರಗೊಂಡು ಆಕಸ್ಮಿಕ ಸ್ಫೋಟಗಳಿಗೆ ಕಾರಣವಾಗುತ್ತವೆ. ಸದ್ಯ ಗಾಯಗೊಂಡ ಸೈನಿಕರ ಸ್ಥಿತಿ ಸ್ಥಿರವಾಗಿದೆ. ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮುನ್ನ (ಅಕ್ಟೋಬರ್) ಕೂಡ ನೆಲಬಾಂಬ್ ಸ್ಫೋಟಗೊಂಡಿತ್ತು. ನೌಶೇರಾ ಸೆಕ್ಟರ್‌ನ ಕಲ್ಸಿಯಾನ್ ಪ್ರದೇಶದ ಗಡಿ ನಿಯಂತ್ರಣ ರೇಖೆ ಬಳಿ ಸಂಭವಿಸಿದ ನೆಲಬಾಂಬ್ ಸ್ಫೋಟದಲ್ಲಿ ಗುರ್ಚರಣ್ ಸಿಂಗ್ ಎಂಬ ಯೋಧ ಗಾಯಗೊಂಡಿದ್ದರು. ಇದೀಗ ಮತ್ತೆ ಅಂತಹದ್ದೇ ಘಟನೆ ನಡೆದಿದೆ.
ಇದನ್ನೂ ಓದಿ:ಪೊಲೀಸ್ ಸಿಬ್ಬಂದಿಯ ರೈಫಲ್ ಕಸಿದು ಗುಂಡು ಹಾರಿಸಿದ ದುಷ್ಕರ್ಮಿಗಳು!
ನಕಲಿ ಪಾಸ್‌ಪೋರ್ಟ್ ಬಳಸಿ ಭಾರತಕ್ಕೆ ಕಾಲಿಟ್ಟಿರುವ 70 ಶಂಕಿತ ಉಗ್ರರು: ಇನ್ನೊಂದೆಡೆ,ನಕಲಿ ಪಾಸ್‌ಪೋರ್ಟ್‌ನೊಂದಿಗೆ ಉಗ್ರರು ಅಕ್ರಮವಾಗಿ ದೇಶಕ್ಕೆ ಪ್ರವೇಶಿಸಿದ್ದಾರೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳು ಶಂಕೆ (ಅಕ್ಟೋಬರ್ 21-2023) ವ್ಯಕ್ತಪಡಿಸಿದ್ದವು. ಸುಮಾರು 70 ಉಗ್ರರು ನೇಪಾಳದ ಗಡಿಯಿಂದ ಭಾರತವನ್ನು ಪ್ರವೇಶಿಸಿದ್ದಾರೆ. ಇವರೆಲ್ಲರೂ ಐಎಸ್‌ಐ (ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್) ಅಥವಾ ಜಮ್ಮತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶಕ್ಕೆ ಸೇರಿದವರು ಎಂದು ಗುರುತಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗಡಿ ಭಾಗದಲ್ಲಿ ಎಚ್ಚರಿಕೆ ರವಾನಿಸಿತ್ತು.
ಪಾಕಿಸ್ತಾನದ ಕಡೆಯಿಂದ ಭಾರತದೊಳಗೆ ನುಸುಳುವುದು ಅಸಾಧ್ಯ ಎಂಬುದನ್ನು ಅರಿತಿರುವ ಉಗ್ರರು ಈಗ ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅದಕ್ಕಾಗಿಯೇ ನೇಪಾಳದ ಗಡಿಯಿಂದ ಭಯೋತ್ಪಾದಕರು ಭಾರತಕ್ಕೆ ಬರುತ್ತಿದ್ದಾರೆ ಎಂಬ ಮಾಹಿತಿ ಇದೆ. ಭಯೋತ್ಪಾದಕರ ಹೊರತಾಗಿ ಕೆಲವು ವಿದೇಶಿಯರೂ ದೇಶಕ್ಕೆ ಪ್ರವೇಶಿಸಿದ್ದಾರೆ ಎಂದು ಕೇಂದ್ರ ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.