ಚೆನ್ನೈ:ಅಂಗಡಿಯಲ್ಲಿ ನಿಷೇಧಿತ ಗುಟ್ಕಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಆತನ ಕೃತ್ಯಗಳು ಬೆಳಕಿಗೆ ಬಂದಿವೆ. ಮೊಬೈಲ್ನಲ್ಲಿದ್ದ ವಿಡಿಯೋಗಳಿಂದ ಕಾಮುಕನ ದುಷ್ಕೃತ್ಯ ಬಯಲಾಗಿದೆ.
ಚೆನ್ನೈನ ಪೆರುಮಾಳ್ (48) ಎಂಬಾತನೇ ಬಂಧಿತ ಆರೋಪಿ. ಈತ ಅಂಗಡಿಯಲ್ಲಿ ನಿಷೇಧಿತ ಗುಟ್ಕಾ ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದು, 30 ಕೆ.ಜಿಯಷ್ಟು ಗುಟ್ಕಾ ವಶಕ್ಕೆ ಪಡೆದಿದ್ದಾರೆ. ಬಳಿಕ ಈತನ ವಿಚಾರಣೆ ವೇಳೆ ಮೊಬೈಲ್ ಪರಿಶೀಲಿಸಿದಾಗ ಬೆಚ್ಚಿಬೀಳಿಸುವ ಸಂಗತಿಗಳು ಹೊರಬಿದ್ದಿವೆ.
ಕಿರುಕುಳ ಪ್ರಕರಣ:
ಮೊಬೈಲ್ ಚೆಕ್ ಮಾಡಿದ ಪೊಲೀಸರಿಗೆ ಪೆರುಮಾಳ್ನ ದುಷ್ಕೃತ್ಯಗಳು ಗೊತ್ತಾಗಿವೆ. ಈತ ಅನೇಕ ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲಧೆ, ದೃಶ್ಯಾವಳಿಗಳನ್ನು ತನ್ನ ಮೊಬೈಲ್ನಲ್ಲಿ ಸೆರೆಹಿಡಿದಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿದೆ.
ಅಂಗಡಿ ನಡೆಸುತ್ತಿದ್ದ ಪೆರುಮಾಳ್ ಮಹಿಳೆ ಹಾಗೂ ಆಕೆಯ ಸಹೋದರಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ. ಈ ಸಂದರ್ಭದಲ್ಲಿ ಆತ, ಮಹಿಳೆಯ ಮಗಳಾದ ಒಂಬತ್ತು ವರ್ಷದ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಆರಂಭದಲ್ಲಿ ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಳು. ಆದರೂ ಆರೋಪಿ ತನ್ನ ಕೃತ್ಯ ಮುಂದುವರೆಸಿದ್ದು, ದೃಶ್ಯಗಳನ್ನೆಲ್ಲ ತನ್ನ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿಟ್ಟುಕೊಂಡಿದ್ದ.
ಅಲ್ಲದೇ ಮುಂದುವರಿದು ತನಿಖೆ ನಡೆಸಿದ ಪೊಲೀಸರಿಗೆ ಇನ್ನಷ್ಟು ಮಾಹಿತಿ ಲಭ್ಯವಾಗಿದೆ. ಈತ ಮಹಿಳೆಯ ಸೋದರಿಯ ಮಗಳಿಗೂ ಕಿರುಕುಳ ನೀಡುತ್ತಿದ್ದ. ದೌರ್ಜನ್ಯ ಎಸಗಲು ಪೆರುಮಾಳ್ 500 ರಿಂದ 2,000 ರೂ. ನೀಡುತ್ತಿದ್ದ. ಹೀಗೆಯೇ ಇನ್ನೂ ಮೂವರು ಬಾಲಕಿಯರು ಸೇರಿ ಐವರ ಮೇಲೆ ಅಟ್ಟಹಾಸ ಮೆರೆದಿರುವುದು ಬೆಳಕಿಗೆ ಬಂದಿದ್ದು, ಅನೇಕ ವಿಡಿಯೋಗಳು ಲಭ್ಯವಾಗಿವೆ.
ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ, ಮಹಿಳೆ ಹಾಗೂ ಆಕೆಯ ಸಹೋದರಿಯನ್ನು ಬಂಧಿಸಿದ ಪೊಲೀಸರು, ಪೋಕ್ಸೊ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ:ದೇವರ ದರ್ಶನಕ್ಕೆ ಹೋಗುತ್ತಿದ್ದ ಭಕ್ತರೇ ಈಕೆಗೆ ಟಾರ್ಗೆಟ್: ಖತರ್ನಾಕ್ ಲೇಡಿಯ ಬಂಧನ, ಬಾಯ್ ಫ್ರೆಂಡ್ ಎಸ್ಕೇಪ್