ಕೊಟ್ಟಾಯಂ(ಕೇರಳ): ಇಲ್ಲಿನ ಕೊಟ್ಟಾಯಂ ಸೆಂಟ್ರಲ್ ಜಂಕ್ಷನ್‌ನಲ್ಲಿ ಕಾಲೇಜು ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತನ ಮೇಲೆ ಕೆಲವರು ಸೇರಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಆರೋಪದ ಮೇಲೆ ಮೂವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಆರೋಪಿಗಳೆಲ್ಲರು ಇಪ್ಪತ್ತರ ಹರೆಯದವರಾಗಿದ್ದಾರೆ. ಆರೋಪಿಗಳ ವಿರುದ್ಧ ಸೆಕ್ಷನ್ 354 (ದೌರ್ಜನ್ಯ) ಮತ್ತು ಸೆಕ್ಷನ್ 307 (ಕೊಲೆ ಯತ್ನ) ಅಡಿ ಪ್ರಕರಣ ದಾಖಲಿಸಲಾಗಿದೆ. ಸೋಮವಾರ ರಾತ್ರಿಯೇ ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ವಿಚಾರಣೆ ನಂತರ ಅವರನ್ನು ಬಂಧಿಸಲಾಗಿದೆ ಎಂದು ಕೊಟ್ಟಾಯಂ ಪಶ್ಚಿಮ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯುವತಿ ಮತ್ತು ಆಕೆಯ ಸ್ನೇಹಿತನ ಮೇಲೆ ಮೂವರಿಂದ ಹಲ್ಲೆ ಸೋಮವಾರ ರಾತ್ರಿ ಕಾಲೇಜು ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತ ಹತ್ತಿರದ ಆಸ್ಪತ್ರೆಯಲ್ಲಿದ್ದ ಸ್ನೇಹಿತನನ್ನು ನೋಡಿಕೊಂಡು ಬಂದು, ನಂತರ ಸಣ್ಣ ಉಪಾಹಾರ ಗೃಹದಲ್ಲಿ ಆಹಾರ ಸೇವಿಸಲು ನಿಂತಿಕೊಂಡಿದ್ದರು. ಆಗ ಉಪಾಹಾರ ಗೃಹದಲ್ಲಿ ಆರೋಪಿಗಳು ಯುವತಿಯ ವಿರುದ್ಧ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದು ವಿಕೋಪಕ್ಕೆ ತಿರುಗಿ, ಗಲಾಟೆಯಾಗಿದೆ ಎಂದು ಅಧಿಕಾರಿ ಹೇಳಿದರು.
ಇದನ್ನೂ ಓದಿ:ಕೊಪ್ಪಳದಲ್ಲಿ ನಿವೃತ್ತ ಸೈನಿಕನ ಮೇಲೆ ಹಲ್ಲೆ.. ಎಫ್ ಐಆರ್ ದಾಖಲು
ಸ್ಥಳೀಯರು ಮಧ್ಯಪ್ರವೇಶಿಸುವ ಮೊದಲು ಆರೋಪಿಗಳು ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿ ಹೇಳಿದರು. ಪೊಲೀಸರು ಕೂಡ ತಕ್ಷಣ ಸ್ಥಳಕ್ಕೆ ಆಗಮಿಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.