ಜಾರ್ಸುಗುಡ (ಒಡಿಶಾ): ಟ್ರಕ್‌ಗಳಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಚಾಲಕರು ಸಜೀವ ದಹನಗೊಂಡು ಹಾಗೂ ಮತ್ತೆ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಒಡಿಶಾದ ಜಾರ್ಸುಗುಡ ಜಿಲ್ಲೆಯಲ್ಲಿ ನಡೆದಿದೆ. ಓವರ್ ಟೇಕ್ ಮಾಡುವ ಭರದಲ್ಲಿ ಒಂದಕ್ಕೊಂದು ಡಿಕ್ಕಿ ಸಂಭವಿಸಿ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡು ಈ ದುರಂತ ನಡೆದಿದೆ.
ಇಲ್ಲಿನ ರಾಷ್ಟ್ರೀಯ ಹೆದ್ದಾರಿ 49ರ ಸದರ್ ಪೊಲೀಸ್ ಠಾಣೆ ಬಳಿ ಬುಧವಾರ ತಡರಾತ್ರಿ ನಡೆದ ಈ ದುರ್ಘಟನೆಯಲ್ಲಿ ಮೂರು ಟ್ರಕ್‌ಗಳಿಗೆ ಸುಟ್ಟು ಹೋಗಿದ್ದು, ಮೂವರೂ ಚಾಲಕರು ಸಜೀವ ದಹನವಾಗಿದ್ದಾರೆ. ಮಾಹಿತಿ ಪ್ರಕಾರ ಮಧ್ಯರಾತ್ರಿ 12.30ರ ಸುಮಾರಿಗೆ ಎರಡು ಟ್ರಕ್‌ಗಳು ಒಂದೇ ದಿಕ್ಕಿನಲ್ಲಿ ಸಾಗುತ್ತಿದ್ದವು. ಈ ವೇಳೆ ಒಂದನ್ನೊಂದು ಹಿಂದಿಕ್ಕಲು ಯತ್ನಿಸುತ್ತಿದ್ದವು. ಅಷ್ಟರಲ್ಲಿ ಇನ್ನೊಂದು ಕಡೆಯಿಂದ ಟ್ರಕ್ ಬಂದಿದೆ.
ಹೀಗೆ, ಓವರ್ ಟೇಕ್ ಮಾಡಲು ಯತ್ನಿಸಿದಾಗ ಎರಡು ಟ್ರಕ್‌ಗಳು ನಿಯಂತ್ರಣ ತಪ್ಪಿ ಪರಸ್ಪರ ಡಿಕ್ಕಿ ಹೊಡೆದಿವೆ. ಇದೇ ವೇಳೆ ಮತ್ತೊಂದು ಟ್ರಕ್ ಹಿಂದಿನಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಮೂರು ಟ್ರಕ್‌ಗಳ ಮಧ್ಯೆ ಘರ್ಷಣೆ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ. ಹಠಾತ್ ಬೆಂಕಿ ಹಬ್ಬಿದ ಕಾರಣ ಟ್ರಕ್ಗಳಿಂದ ಹೊರಬರಲಾಗದೆ ಮೂವರು ಚಾಲಕರು ಸುಟ್ಟು ಹೋಗಿದ್ದಾರೆ. ಅಲ್ಲದೇ, ಈ ಘಟನೆಯಲ್ಲಿ ಇನ್ನೂ ಮೂವರು ಸಹ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದ ವಿಷಯ ತಿಳಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ತಕ್ಷಣವೇ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ, ಬೆಂಕಿ ತೀವ್ರತೆ ಹೆಚ್ಚಾಗಿದ್ದರಿಂದ ಸುಮಾರು 1 ರಿಂದ 2 ಗಂಟೆಗಳ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ನಿಯಂತ್ರಿಸಿದ್ದಾರೆ. ಮತ್ತೊಂದೆಡೆ, ಈ ಘಟನೆಯಿಂದ ರಸ್ತೆ ಸಂಚಾರ ಕೂಡ ಸ್ಥಗಿತವಾಗಿತ್ತು. ನೂರಾರು ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದವು. ಚಾಲಕರ ನಿರ್ಲಕ್ಷ್ಯದಿಂದೇ ದುರಂತ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ರಾಜಸ್ಥಾನದಲ್ಲಿ ಮೂವರು ಸಾವು:ಮತ್ತೊಂದೆಡೆ,ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಟೈರ್ ಸ್ಫೋಟಗೊಂಡ ಪರಿಣಾಮ ಕಾರು ಪಲ್ಟಿಯಾಗಿ ಮೂವರು ಯುವಕರು ಸಾವನ್ನಪ್ಪಿದ್ದಾರೆ. ಮೃತರನ್ನು ಖಂಗರ್ ಸಿಂಗ್ (24), ಶ್ಯಾಮ್ ಸಿಂಗ್ (23) ಮತ್ತು ಪ್ರೇಮ್ ಸಿಂಗ್ (23) ಎಂದು ಗುರುತಿಸಲಾಗಿದ್ದು, ಎಲ್ಲರೂ ಬಾರ್ಮರ್ ಜಿಲ್ಲೆಯ ಮಿಥಾಡಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ.
ಅಲ್ಲದೇ, ಎಲ್ಲರೂ ಮೂವರು ಸೋದರ ಸಂಬಂಧಿಗಳಾಗಿದ್ದಾರೆ. ಬಾರ್ಮರ್ ನಗರದಿಂದ ತಮ್ಮ ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಜಿಲ್ಲೆಯ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರು ಟೈರ್ ಇದ್ದಕ್ಕಿದ್ದಂತೆ ಒಡೆದ ಪರಿಣಾಮ ವಾಹನ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂರನೇ ಯುವಕ ಗಾಯಗೊಂಡಿದ್ದ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸ್ಥಳೀಯ ಪೊಲೀಸರು ಯುವಕನನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಆತ ಕೂಡ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಕೆನಾಡದಿಂದ ಬಂದ ಯುವತಿಯನ್ನು ಗುಂಡಿಕ್ಕಿ ಕೊಂದು ಹೊಲದಲ್ಲಿ ಹೂತಿಟ್ಟ ಪ್ರಿಯಕರ!