ನಿಜಾಮಾಬಾದ್(ತೆಲಂಗಾಣ):ಸ್ನೇಹಿತರ ದಿನ(friendship day)ದಂದು ಮೋಜು-ಮಸ್ತಿ ಮಾಡಲು ತೆರಳಿದ್ದ ಸಂದರ್ಭದಲ್ಲಿ ಮೂವರು ತಮ್ಮ ಪ್ರಾಣ ಕಳೆದುಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ನಿಜಾಮಾಬಾದ್ ಜಿಲ್ಲೆಯ ನಂದಿಪೇಟೆ ಪ್ರದೇಶದ ಎಸ್‌ಆರ್‌ಎಸ್‌ಪಿ(ಶ್ರೀ ರಾಮ್ ಸಾಗರ್ ಯೋಜನೆ) ಹಿನ್ನೀರಿನ ಸ್ಥಳಕ್ಕೆ ಇವರೆಲ್ಲರೂ ತೆರಳಿದ್ದಾಗ ಅವಘಡ ಸಂಭವಿಸಿದೆ. ಸ್ನೇಹಿತನ ರಕ್ಷಣೆ ಮಾಡಲು ಹೋಗಿ ಮೂವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಸ್ನೇಹಿತರ ದಿನದಂದು ನಿಜಾಮಾಬಾದ್ನ ಅರಸಪಲ್ಲಿ ಗ್ರಾಮದ ಉದಯ್, ರಾಹುಲ್,ಶಿವ, ಸಾಯಿಕೃಷ್ಣ, ರೋಹಿತ್ ಮತ್ತು ರಾಜೇಂದರ್ ಒಟ್ಟಿಗೆ ಎಂಜಾಯ್ ಮಾಡಲು ತೆರಳಿದ್ದರು. ಆರಂಭದಲ್ಲಿ ಎಲ್ಲರೂ ಡ್ಯಾಂ ಮೇಲೆ ನಿಂತುಕೊಂಡು ಸೆಲ್ಫಿ ತೆಗೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ನೀರಿನೊಳಗೆ ಮೋಜು-ಮಸ್ತಿ ಮಾಡುವ ಉದ್ದೇಶದಿಂದ ಶಿವ ಎಂಬ ಯುವಕ ಜಿಗಿದಿದ್ದಾನೆ. ಆತ ಮುಳುಗುತ್ತಿದ್ದಂತೆ ತಕ್ಷಣವೇ ಸ್ನೇಹಿತನ ರಕ್ಷಣೆ ಮಾಡಲು ಉಳಿದ ಐವರು ಜಿಗಿದಿದ್ದಾರೆ.