ಸಿರೋಹಿ (ರಾಜಸ್ಥಾನ): ಇಲ್ಲಿನ ಅಬು ರೋಡ್ ರಿಕೋ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ, ಎರಡು ಕಾರುಗಳಲಿದ್ದ ಸುಮಾರು 3 ಕೋಟಿಗೂ ಅಧಿಕ ನಗದನ್ನು ಬುಧವಾರ ವಶಪಡಿಸಿಕೊಂಡಿದ್ದಾರೆ. ನೋಟುಗಳ ಎಣಿಕೆ ನಡೆಯುತ್ತಿದ್ದು, ಇದುವರೆಗೂ 3 ಕೋಟಿಯಷ್ಟು ಮಾತ್ರವೇ ಎಣಿಸಲಾಗಿದ್ದು, ಇನ್ನೂ ಎಣಿಕೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಸಂಪೂರ್ಣ ಎಣಿಕೆ ಬಳಿಕವೇ ಪತ್ತೆಯಾದ ಒಟ್ಟು ಹಣವೆಷ್ಟು ಎಂಬುದು ತಿಳಿಯಲಿದೆ.
ಕಾರಿನಲ್ಲಿ ಸಿಕ್ಕಿರುವ ಹಣದ ಮೊತ್ತ ಮೂರು ಕೋಟಿಗೂ ಹೆಚ್ಚು ಇರಬಹುದು ಎಂದು ಅಂದಾಜಿಸಲಾಗಿದೆ. ಎಸ್ಪಿ ಮಮತಾ ಗುಪ್ತಾ ಅವರ ಸೂಚನೆಯ ಮೇರೆಗೆ, ಅಬು ರೋಡ್ ರಿಕೊ ಎಸ್‌ಎಚ್‌ಒ ಹರ್ಚಂದ್ ದೇವಾಸಿ ನೇತೃತ್ವದಲ್ಲಿ ರಾಜಸ್ಥಾನ-ಗುಜರಾತ್ ಗಡಿಯ ಮಾವಲ್ ಪೋಸ್ಟ್‌ನಲ್ಲಿ ಎರಡು ಕಾರುಗಳನ್ನು ಪರಿಶೀಲಿಸಲಾಗಿತ್ತು. ಈ ವೇಳೆ ಕಾರಿನ ಸೀಟಿನ ಕೆಳಗೆ ನೋಟುಗಳ ಬಂಡಲ್‌ಗಳು ಪತ್ತೆಯಾಗಿವೆ. ಎರಡೂ ಕಾರಿನಲ್ಲಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.