ರಾಮಗಢ (ಜಾರ್ಖಂಡ್) : ಜಾರ್ಖಂಡ್‌ನ ರಾಮಗಢ ಜಿಲ್ಲೆಯ ಬರ್ಕಾಕಾನಾ ಪೊಲೀಸ್ ಠಾಣೆ ವ್ಯಾಪ್ತಿಯ ಉರ್ಲಾಂಗು ಎಂಬಲ್ಲಿ ಬುಧವಾರದಂದು ನೀರು ತುಂಬಿದ್ದ ಗುಂಡಿಯಲ್ಲಿ ಮುಳುಗಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಬುಧವಾರ ಸಂಜೆ ಮೂವರು ಮಕ್ಕಳು ಆಟವಾಡಲು ಮನೆಯಿಂದ ಹೊರಟಿದ್ದಾರೆ. ಕತ್ತಲಾದರೂ ಮಕ್ಕಳು ಮನೆಗೆ ಬಾರದ ಹಿನ್ನೆಲೆ, ಕುಟುಂಬಸ್ಥರು ಅವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಕುಟುಂಬಸ್ಥರು ಆ ಗುಂಡಿ ಕಡೆ ಹೋದಾಗ ಅಲ್ಲಿ ಮಕ್ಕಳ ಚಪ್ಪಲಿ ಸಿಕ್ಕಿದೆ. ನಂತರ ಗ್ರಾಮಸ್ಥರ ಗುಂಪೊಂದು ನೀರಿಗೆ ಹಾರಿ ಮೂವರು ಮಕ್ಕಳ ಮೃತದೇಹಗಳನ್ನು ಹೊರತೆಗೆದಿದೆ. ಮೃತ ಮಕ್ಕಳನ್ನು ಶೈಲಿ ಲಾಕ್ರಾ (9) ಸುಜಲ್ ಓರಾನ್ (6) ಮತ್ತು ಕೃತಿ ಕುಮಾರಿ (8) ಎಂದು ಗುರುತಿಸಲಾಗಿದೆ. ಈ ಮೂವರು ಸಂಬಂಧಿಕರಾಗಿದ್ದು, ಇದೀಗ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.