ಗರ್ವಾ(ಜಾರ್ಖಂಡ್) : ಜಲಾಶಯಕ್ಕೆ ಸ್ನಾನಕ್ಕೆಂದು ಇಳಿದ ಬುಡಕಟ್ಟು ಜನಾಂಗದ ಓರ್ವ ಬಾಲಕಿ ಸೇರಿ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಾರ್ಖಂಡ್ನ ಗರ್ವಾ ಜಿಲ್ಲೆಯಲ್ಲಿ ಇಂದು ನಡೆದಿದೆ. ಮೇಕೆ ಮೇಯಿಸಲು ಬಂದಿದ್ದ ಮೂವರು ಜಲಾಶಯಕ್ಕೆ ಇಳಿದಿದ್ದರು ಎಂದು ತಿಳಿದುಬಂದಿದೆ. ಮೃತರನ್ನು ಜಂಗೀಪುರ ನಿವಾಸಿಗಳಾದ ಪಂಕಜ್ ಒರಾನ್, ರೂಪ ಕುಮಾರಿ, ಮುನ್ನಾ ಒರಾನ್ ಎಂದು ಗುರುತಿಸಲಾಗಿದೆ.
ಸ್ನಾನಕ್ಕೆ ತೆರಳಿದ್ದಾಗ ಮುಳುಗಿ ಸಾವು :ಮೃತರು ಇಂದು ಬೆಳಿಗ್ಗೆ ಮೇಕೆ ಮೇಯಿಸಲು ಬಂದಿದ್ದರು. ಮೇಕೆ ಮೇಯಿಸಿದ ಬಳಿ ಜಲಾಶಯಕ್ಕೆ ಸ್ನಾನಕ್ಕೆ ಇಳಿದಿದ್ದಾರೆ ಈ ವೇಳೆ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ನೀರಿನಲ್ಲಿ ಮುಳುಗುತ್ತಿರುವುದನ್ನು ಅಲ್ಲಿಯೇ ಇದ್ದ ಮಹಿಳೆಯರು ಕಂಡಿದ್ದಾರೆ.
ತಕ್ಷಣ ಈ ಮಹಿಳೆಯರು ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ಮಕ್ಕಳ ಮೃತದೇಹವನ್ನು ಜಲಾಶಯದಿಂದ ಹೊರತೆಗೆದಿದ್ದಾರೆ. ಆದರೆ ಅದಾಗಲೇ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗರ್ವಾದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರಲ್ಲಿ ಮುನ್ನ ಓರಾನ್ ಬೇಸಿಗೆ ರಜೆ ಹಿನ್ನಲೆ ಅಜ್ಜನ ಮನೆಗೆ ಬಂದಿದ್ದ ಎಂದು ತಿಳಿದುಬಂದಿದೆ.ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ಬಗ್ಗೆ ಗ್ರಾಮಸ್ಥರು ಬಂಶೀಧರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಅಲ್ಲದೆ ಗ್ರಾಮಸ್ಥರು ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ವಿಜಯಪುರದಲ್ಲಿ ಈಜಲು ಹೋಗಿ ಯುವಕ ಸಾವು: ಯುವಕನೋರ್ವ ತೋಟದ ಬಾವಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಸಿಂದಗಿ ತಾಲೂಕಿನ ಮೊರಟಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಈಜಲು ಬಾರದೇ ಯುವಕ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತನನ್ನು ಪ್ರವೀಣ್ ಗೊಂದಳಿ (17) ಎಂದು ಗುರುತಿಸಲಾಗಿದೆ.
ಪ್ರವೀಣ್ ಗೊಂದಳಿ ಮೊರಟಗಿ ಗ್ರಾಮದ ಬಾಬುಗೌಡ ಜಗಶೆಟ್ಟಿ ಎಂಬುವರ ಬಾವಿಯಲ್ಲಿ ಈಜಲು ಹೋಗಿದ್ದರು. ಈಜು ಬಾರದ ಹಿನ್ನೆಲೆ ಪ್ರವೀಣ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಇನ್ನು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈಜು ತಜ್ಞರು ಆಗಮಿಸಿ ಶವವನ್ನು ಬಾವಿಯಿಂದ ಹೊರಕ್ಕೆ ತೆಗೆದಿದ್ದಾರೆ. ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರಿನಲ್ಲಿ ಬಾವಿಗೆ ಬಿದ್ದು ಸಹೋದರರು ಸಾವು :ಮೇಕೆಗೆ ಸೊಪ್ಪು ತರಲು ಹೋಗಿ ಬಾವಿಗೆ ಬಿದ್ದ ಅಣ್ಣನನ್ನು ಕಾಪಾಡಲು ಹೋದ ತಮ್ಮನೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಶಿರಾ ತಾಲೂಕಿನ ದ್ವಾರನಕುಂಟೆ ಗ್ರಾಮ ನಿವಾಸಿಗಳಾದ ಸತೀಶ್ (32) ಹಾಗೂ ಪ್ರಸನ್ನ(29) ಎಂದು ಗುರುತಿಸಲಾಗಿದೆ.
ಮೇಕೆಗೆ ಸೊಪ್ಪು ತರಲು ಹೋದ ಸತೀಶ್ ಮರದಿಂದ ಆಯತಪ್ಪಿ ಅಲ್ಲಯೇ ಇದ್ದ ಬಾವಿಗೆ ಬಿದ್ದಿದ್ದಾನೆ. ಈ ವೇಳೆ ಬಾವಿಗೆ ಬಿದ್ದ ಅಣ್ಣನನ್ನು ರಕ್ಷಿಸಲು ಹೋದ ಸಹೋದರನೂ ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ. ಈ ಸಂಬಂಧ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಇದನ್ನೂ ಓದಿ :ದೇಹದ ಎತ್ತರ ಕಡಿಮೆ ಎಂಬ ಕೊರಗು; ನೊಂದು ಆತ್ಮಹತ್ಯೆಗೆ ಶರಣಾದ ಯುವತಿ