ಗೋರಖ್‌ಪುರ (ಉತ್ತರ ಪ್ರದೇಶ) :ಜಿಲ್ಲೆಯ ಖಜ್ನಿ ತಹಸಿಲ್‌ನ ಸಿಕ್ರಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಮೆರಿಕ ಸೆಂಟ್ರಲ್ ಅಕಾಡೆಮಿಯ ಶಾಲಾ ಮಕ್ಕಳಿದ್ದ ಬಸ್ ಶುಕ್ರವಾರ ಪಲ್ಟಿಯಾಗಿದೆ. ಈ ಅವಘಡದಲ್ಲಿ ಮೂವರು ಮಕ್ಕಳು ಸಾವನ್ನಪ್ಪಿದ್ದು, ಹಲವು ಮಕ್ಕಳು ಗಾಯಗೊಂಡಿದ್ದಾರೆ. ಈಗಾಗಲೇ ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ. ಘಟನಾ ಸ್ಥಳಕ್ಕೆ ಸಿಒ ಖಜನಿ, ಎಸ್‌ಒ ಸೇರಿದಂತೆ ಆಡಳಿತಾಧಿಕಾರಿಗಳು ಆಗಮಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಿ ಬಸ್ನಡಿ ಸಿಲುಕಿದ್ದ ಮಕ್ಕಳನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ.
ಬಂಕಟಿ ಸಿಕ್ರಿಗಂಜ್ ಬಳಿಯಲ್ಲಿ ಓವರ್ ಟೇಕ್ ಮಾಡಲು ಮುಂದಾದಾಗ ಶಾಲಾ ಬಸ್ ಪಲ್ಟಿಯಾಗಿದೆ ಎಂದು ಹೇಳಲಾಗುತ್ತಿದೆ. ಶಾಲಾ ಬಸ್ ಪಲ್ಟಿಯಾದ ತಕ್ಷಣ ಒಳಗೆ ಸಿಕ್ಕಿಬಿದ್ದ ಮಕ್ಕಳು ಕಿರುಚಲು ಆರಂಭಿಸಿದ್ದಾರೆ. ಈ ವೇಳೆ, ಸ್ಥಳಕ್ಕೆ ಧಾವಿಸಿದ ಜನರು ಪೊಲೀಸರಿಗೆ ಮಾಹಿತಿ ನೀಡಿ ಗಾಯಗೊಂಡ ಮಕ್ಕಳನ್ನು ಹೊರಗೆ ಕರೆತರಲು ಆರಂಭಿಸಿದ್ದಾರೆ. ಮಾಹಿತಿ ಮೇರೆಗೆ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ.
3 ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಉರುವ ಬಜಾರ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಘಟನೆ ಬಳಿಕ ಸ್ಥಳದಲ್ಲಿ ಅಪಾರ ಜನ ಜಮಾಯಿಸಿದ್ದಾರೆ. ಬಸ್ನಲ್ಲಿ ಆಸನಕ್ಕಿಂತ ಹೆಚ್ಚು ಮಕ್ಕಳು ಸೇರಿದ್ದರು ಎಂಬುದಾಗಿ ತಿಳಿದು ಬಂದಿದೆ. ಬೆಳಗಿನ ಜಾವ ಮಂಜು ಮುಸುಕಿತ್ತು. ಈ ವೇಳೆ, ಬಸ್ ಓವರ್ ಟೇಕ್ ಮಾಡಲು ಮುಂದಾದಾಗ ಈ ಅವಘಡ ಸಂಭವಿಸಿದೆ. ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದು ತಿಳಿದುಬಂದಿದೆ.