ಬರ್ವಾನಿ (ಮಧ್ಯಪ್ರದೇಶ):ಗುಡಿಸಲಿಗೆ ಬೆಂಕಿ ತಗುಲಿ ಮೂವರು ಸಹೋದರರು ಸಾವನ್ನಪ್ಪಿರುವ ದಾರುಣ ಘಟನೆ ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಮೃತರನ್ನು ಮುಖೇಶ್ (10), ರಾಕೇಶ್ (8) ಮತ್ತು ಏಕೇಶ್ (6) ಎಂದು ಗುರುತಿಸಲಾಗಿದೆ. ಮಧ್ಯಪ್ರದೇಶ-ಮಹಾರಾಷ್ಟ್ರ ಗಡಿಯಲ್ಲಿರುವ ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಪಾಟಿ ಪೊಲೀಸ್ ಠಾಣೆ ವ್ಯಾಪ್ತಿಯ ಬೋರ್ಕುಂಡ್ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಅವಘಡದಲ್ಲಿ ನಾಲ್ಕು ಮೇಕೆಗಳು ಮತ್ತು ಒಂದು ಹೋರಿ ಸುಟ್ಟು ಕರಕಲಾಗಿದೆ ಎಂದು ಬರ್ವಾನಿ ಪೊಲೀಸ್ ವರಿಷ್ಠಾಧಿಕಾರಿ ಪುನೀತ್ ಗೆಹ್ಲೋಟ್ ತಿಳಿಸಿದ್ದಾರೆ.
ಹೆತ್ತವರ ಎದುರೇ ಸುಟ್ಟು ಕರಕಲಾದ ಮಕ್ಕಳು: "ಅವಘಡದ ವೇಳೆ ಮಕ್ಕಳ ಪೋಷಕರು ಮನೆಯ ಸಮೀಪ ಬಾವಿ ತೋಡುತ್ತಿದ್ದರು. ಸುಮಾರು 10-12 ಅಡಿ ಆಳದಲ್ಲಿ ಕೆಲಸ ಮಾಡುತ್ತಿದ್ದಾಗ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿದೆ. ಹೊಗೆಯನ್ನು ನೋಡಿದ ಪೋಷಕರು ಗುಡಿಸಲಿನ ಬಳಿ ತಲುಪಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಆದರೆ ಅಷ್ಟರಲ್ಲಾಗಲೇ ಅವರ ಗುಡಿಸಲು ಸಂಪೂರ್ಣ ಬೆಂಕಿಗೆ ಆಹುತಿಯಾಗಿತ್ತು. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಬಾಲಕರ ತಾಯಿ ಅಡುಗೆ ಮಾಡಿದ ನಂತರ ಒಲೆಯ ಆರಿಸದಿರುವುದು ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಫೋರೆನ್ಸಿಕ್ಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ" ಎಂದು ಗೆಹ್ಲೋಟ್ ಮಾಹಿತಿ ನೀಡಿದ್ದಾರೆ.
12 ಲಕ್ಷ ಆರ್ಥಿಕ ನೆರವು:ಅಪಘಾತದ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ ಡಾ. ರಾಹುಲ್ ಹರಿದಾಸ್ ಫಟಿಂಗ್ ಮೃತ ಬಾಲಕರ ಕುಟುಂಬಕ್ಕೆ 12 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುವುದು ಎಂದು ಘೋಶಿಸಿದ್ದಾರೆ. ಜಿಲ್ಲಾಡಳಿತ ಆರ್‌ಬಿಸಿ 6(4) ಅಡಿಯಲ್ಲಿ 12 ಲಕ್ಷ ರೂಪಾಯಿ ಆರ್ಥಿಕ ಪರಿಹಾರವನ್ನು ನೀಡಲಿದೆ. ಮೃತ 3 ಮಕ್ಕಳ ಸಹಾಯಧನ ಮತ್ತು ಮನೆಯಲ್ಲಿ ಇಟ್ಟಿದ್ದ ಸಾಮಾನುಗಳಿಗೆ 1 ಲಕ್ಷ 91 ಸಾವಿರ ರೂಪಾಯಿ ಪರಿಹಾರ ಮಂಜೂರು ಮಾಡಲಾಗಿದೆ ಎಂದು ಅವರು ತಿಳಿಸಿದರು.
500 ಅಂಗಡಿ ಅಗ್ನಿಗಾಹುತಿ: ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿತ್ತು. ಕಾನ್ಪುರ ನಗರದ ಅನ್ವರ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಬನ್ಸ್‌ಮಂಡಿಯ ಬಟ್ಟೆ ಮಾರುಕಟ್ಟೆಯಲ್ಲಿ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡು ಸುಮಾರು 500 ಅಂಗಡಿಗಳು ಸುಟ್ಟು ಭಸ್ಮವಾಗಿದ್ದವು. ಬಟ್ಟೆ ಮತ್ತಿತರ ವಸ್ತುಗಳು ಸುಟ್ಟು ಕರಕಲಾಗಿವೆ. ಈದ್ ಸೀಸನ್ ನಿಮಿತ್ತ ಸಂಗ್ರಹಿಸಿಟ್ಟಿದ್ದ ದಾಸ್ತಾನು ನಾಶವಾಗಿದೆ ಎಂದು ವರ್ತಕರು ಹೇಳಿದ್ದರು. ಮಾರುಕಟ್ಟೆಯಲ್ಲಿರುವ ಎಆರ್ ಟವರ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಟ್ಟೆ, ರಟ್ಟು, ಪೇಪರ್ ನಂತಹ ದಹನಕಾರಿ ವಸ್ತುಗಳು ಇದ್ದುದರಿಂದ ಸ್ವಲ್ಪ ಹೊತ್ತಿನಲ್ಲಿ ಅಪಾರ ನಷ್ಟ ಉಂಟಾಗಿತ್ತು. ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬರುವಷ್ಟರಲ್ಲಿ 100ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಹೋಗಿದ್ದವು.
ಇದನ್ನೂ ಓದಿ:500 ಅಂಗಡಿ ಅಗ್ನಿಗಾಹುತಿ, ಕೋಟಿಗೂ ಅಧಿಕ ನಷ್ಟ!- ವಿಡಿಯೋ