ತಿರುವನಂತಪುರಂ:ಕೇರಳ ಬಿಜೆಪಿ ತಮ್ಮ ಅಭ್ಯರ್ಥಿಗಳ ಆಯ್ಕೆಯನ್ನು ಪೂರ್ಣಗೊಳಿಸಿದೆ. ಈ ಬಾರಿ ಕೇರಳದಲ್ಲಿ ಪಕ್ಷ ಗೆಲುವು ಸಾಧಿಸಬೇಕು ಎಂದು ಪಣತೊಟ್ಟಿದ್ದು, ಚುನಾವಣಾ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಈ ನಡುವೆ ಮೂವರು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿವೆ.
ಕಣ್ಣೂರು ಬಿಜೆಪಿ ಜಿಲ್ಲಾಧ್ಯಕ್ಷ ಮತ್ತು ತಲಶೇರಿ ಕ್ಷೇತ್ರದಲ್ಲಿ ಪಕ್ಷಕ್ಕೆ ಆಯ್ಕೆಯಾದ ಅಭ್ಯರ್ಥಿ ಎನ್. ಹರಿದಾಸನ್ ಅವರ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ. 2016ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಮತಗಳನ್ನು (22,125 ಮತಗಳನ್ನು) ಪಡೆದ ಕ್ಷೇತ್ರವೇ ತಲಶೇರಿ. ನಿಯಮಗಳ ಪ್ರಕಾರ, ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವಾಗ, ಫಾರ್ಮ್ ಎ, ಪಕ್ಷದ ಅಧ್ಯಕ್ಷರ ಮುದ್ರೆ ಮತ್ತು ಸಹಿಯನ್ನು ಹೊಂದಿರಬೇಕು. ಆದರೆ, ಹರಿದಾಸನ್ ಮತ್ತು ಡಮ್ಮಿ ಅಭ್ಯರ್ಥಿ ಕೆ.ಲಿಜೇಶ್ ಅವರು ಸಲ್ಲಿಸಿದ ನಾಮಪತ್ರಗಳಲ್ಲಿ ಪಕ್ಷದ ಅಧ್ಯಕ್ಷರ ಮುದ್ರೆ ಮತ್ತು ಚಿಹ್ನೆ ಇರಲಿಲ್ಲ. ಈ ಆಧಾರದ ಮೇಲೆ ನಾಮಪತ್ರ ತಿರಸ್ಕರಿಸಲಾಗಿದೆ. ಈ ಕ್ಷೇತ್ರದ ಬಗ್ಗೆ ಪಕ್ಷವು ಹೆಚ್ಚಿನ ಭರವಸೆ ಹೊಂದಿದ್ದರಿಂದ ಜಿಲ್ಲಾಧ್ಯಕ್ಷರು ಸ್ವತಃ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಪ್ರಸ್ತುತ, ತಲಶೇರಿಯಲ್ಲಿ ಸಿಪಿಎಂ ಮಾತ್ರ ಇದೆ.
ಎನ್‌ಡಿಎಯ ದೇವಿಕುಲಂ ಅಭ್ಯರ್ಥಿಯ ನಾಮಪತ್ರಗಳನ್ನು ಸಹ ತಿರಸ್ಕರಿಸಿದ್ದರಿಂದ ಬಿಜೆಪಿಗೆ ಮತ್ತೊಂದು ಹೊಡೆತ ಬಿದ್ದಿದೆ. ಎನ್‌ಡಿಎನ ಮಿತ್ರಪಕ್ಷ ಎಐಎಡಿಎಂಕೆಯ ಆರ್.ಧನಲಕ್ಷ್ಮಿ ಅವರ ನಾಮನಿರ್ದೇಶನವನ್ನು ತಿರಸ್ಕರಿಸಲಾಯಿತು. ಏಕೆಂದರೆ ಫಾರ್ಮ್ 26 ರಲ್ಲಿನ ಅಫಿಡವಿಟ್ ಸಂಪೂರ್ಣವಾಗಿ ಭರ್ತಿಯಾಗಿರಲಿಲ್ಲ. ದೇವಿಕುಲಂನಲ್ಲಿ ಎನ್‌ಡಿಎ ಡಮ್ಮಿ ಅಭ್ಯರ್ಥಿಯ ನಾಮಪತ್ರವನ್ನೂ ಈ ಹಿಂದೆ ತಿರಸ್ಕರಿಸಲಾಗಿತ್ತು. ಅಂತೆಯೇ, ಬಿಜೆಪಿ ಹೆಚ್ಚು ಪ್ರಭಾವ ಬೀರುವ ತ್ತೊಂದು ಸ್ಥಳವಾದ ಗುರುವಾಯೂರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಲ್ಲಿಸಿದ್ದ ನಾಮಪತ್ರವನ್ನೂ ತಿರಸ್ಕರಿಸಲಾಗಿದೆ. ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷರಾದ ವಕೀಲೆ ನಿವೇದಿತಾ ಅವರು ಸಲ್ಲಿಸಿದ್ದ ನಾಮಪತ್ರವನ್ನು ರಾಜ್ಯ ಅಧ್ಯಕ್ಷರ ಅಫಿಡವಿಟ್‌ನಲ್ಲಿ ಮಾನದಂಡಗಳಿಗೆ ಬದ್ಧವಾಗಿಲ್ಲದ ಕಾರಣ ತಿರಸ್ಕರಿಸಲಾಗಿದೆ.