ಕರ್ನಾಟಕ

karnataka

ETV Bharat / bharat

Thrashing Of Tribal Youth: ಜೆಸಿಬಿಗೆ ಕಟ್ಟಿ ಬುಡಕಟ್ಟು ಯುವಕನಿಗೆ ಥಳಿತ.. ಮೂವರು ಆರೋಪಿಗಳ ಬಂಧನ - ಯುವಕನನ್ನು ಹಗ್ಗದಿಂದ ಜೆಸಿಬಿಗೆ ಕಟ್ಟಿ ಹಾಕಿ ಥಳಿಸಿದ ಘಟನೆ

ಛತ್ತೀಸ್‌ಗಢದ ಸೂರಜ್‌ಪುರ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದ ಯುವಕನನ್ನು ಜೆಸಿಬಿಗೆ ಕಟ್ಟಿ ಥಳಿಸಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

three accused held for thrashing of tribal youth in surajpur, Chhattisgarh
ಜೆಸಿಬಿಗೆ ಕಟ್ಟಿ ಬುಡಕಟ್ಟು ಯುವಕನಿಗೆ ಥಳಿತ.. ಮೂವರು ಆರೋಪಿಗಳ ಬಂಧನ

By

Published : Jul 12, 2023, 7:39 PM IST

Updated : Jul 12, 2023, 7:56 PM IST

ಸೂರಜ್‌ಪುರ (ಛತ್ತೀಸ್‌ಗಢ): ಮೊಬೈಲ್ ಫೋನ್ ಕದ್ದ ಆರೋಪದ ಮೇಲೆ ಬುಡಕಟ್ಟು ಜನಾಂಗದ ಯುವಕನನ್ನು ಹಗ್ಗದಿಂದ ಜೆಸಿಬಿಗೆ ಕಟ್ಟಿ ಹಾಕಿ ಥಳಿಸಿದ ಘಟನೆ ಛತ್ತೀಸ್‌ಗಢದ ಸೂರಜ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅಭಿಷೇಕ್ ಪಟೇಲ್, ಕೃಷ್ಣಕುಮಾರ್ ಪಟೇಲ್ ಮತ್ತು ಸೋನು ರಾಥೋಡ್ ಎಂದು ಗುರುತಿಸಲಾಗಿದೆ.

ಒಂದೆಡೆ ಆದಿವಾಸಿಗಳು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿದ್ದಾರೆ. ಇನ್ನೊಂದೆಡೆ ಅವರ ಮೇಲೆ ದೌರ್ಜನ್ಯದ ಕೃತ್ಯಗಳು ವರದಿಯಾಗುತ್ತಲೇ ಇವೆ. ಇತ್ತೀಚೆಗಷ್ಟೇ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು ವ್ಯಕ್ತಿಯ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ಬೆಳಕಿಗೆ ಬಂದಿತ್ತು. ಈ ಘಟನೆ ಮಾಸುವ ಮುನ್ನವೇ ಛತ್ತೀಸ್​ಗಢದಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ:Man Urinating: ಬುಡಕಟ್ಟು ವ್ಯಕ್ತಿಯ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ

ಸೂರಜ್‌ಪುರದಿಂದ ಚಂದೋರಾವರೆಗೆ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ನಡುವೆ ಪ್ರತಾಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬುಡಕಟ್ಟು ಯುವಕ ಮೊಬೈಲ್ ಫೋನ್ ಕದ್ದಿದ್ದಾನೆ ಎಂದು ಆರೋಪಿಸಿ ಗ್ರೇಡರ್ ಮಷಿನ್ ಆಪರೇಟರ್ ಸೇರಿ ಮೂವರು ಆತನೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ. ಅಲ್ಲದೇ, ಜೆಸಿಬಿಗೆ ಯುವಕನನ್ನು ಕಟ್ಟಿ ಥಳಿಸಿ ದಬ್ಬಾಳಿಕೆ ಎಸಗಿದ್ದಾರೆ. ಇದರಲ್ಲಿ ಮತ್ತೊಬ್ಬ ಆರೋಪಿ ಸಹ ಭಾಗಿಯಾಗಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.

ನಾನು ಮಾಯಾಪುರ ಗ್ರಾಮದಿಂದ ನನ್ನ ಗ್ರಾಮ ಸರ್ಹರಿಗೆ ಹೋಗುತ್ತಿದ್ದೆ. ಈ ವೇಳೆ, ಮಾರ್ಗ ಮಧ್ಯೆ ರಸ್ತೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿದ್ದ ಗ್ರೇಡರ್ ಯಂತ್ರದ ಬಳಿ ನಿಂತಿದ್ದೆ. ಆಗ ಗ್ರೇಡರ್ ಯಂತ್ರದ ಆಪರೇಟರ್ ತನ್ನ ಇಬ್ಬರು ಸಹಚರರೊಂದಿಗೆ ಬಂದು ಮೊಬೈಲ್ ಕಳ್ಳತನ ಮಾಡಿದ್ದೇನೆ ಎಂದು ಆರೋಪಿಸಿದ. ನಾನು ಮೊಬೈಲ್​ ಕದ್ದಿಲ್ಲ ಎಂದು ಹೇಳಿದರೂ ಜೆಸಿಬಿಗೆ ಕಟ್ಟಿ ಹಾಕಿ ಥಳಿಸಿದ್ದಾರೆ. ಈ ವಿಷಯ ಪೊಲೀಸರಿಗೆ ತಿಳಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದೂ ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತ ಯುವಕ ತಿಳಿಸಿದ್ದಾನೆ.

ಇದನ್ನೂ ಓದಿ:ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಪ್ರಕರಣ.. ಆರೋಪಿ ಪ್ರವೇಶ್ ಶುಕ್ಲಾ ಬಂಧನ, ಮನೆ ನೆಲಸಮ!

ಈ ಬಗ್ಗೆ ಎಎಸ್ಪಿ ಶೋಭರಾಜ್ ಅಗರ್ವಾಲ್ ಹಾಗೂ ಪ್ರತಾಪುರ ಪೊಲೀಸ್ ಸ್ಟೇಷನ್ ಹೌಸ್ ಆಫೀಸರ್ ಕಿಶೋರ ಕೆರ್ಕೆಟ್ಟಾ ಪ್ರತಿಕ್ರಿಯಿಸಿ, ಬುಡಕಟ್ಟು ಜನಾಂಗದ ಯುವಕನಿಗೆ ಥಳಿಸಿದ ಆರೋಪದ ಬಗ್ಗೆ ಬಂದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ದೂರಿದ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಈಗಾಗಲೇ ಬಂಧಿತ ಮೂವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಹೇಳಿದ್ದಾರೆ.

ಈ ಘಟನೆಯಲ್ಲಿ ಬಂಧಿತರಾಗಿರುವ ಮೂವರೂ ಆರೋಪಿಗಳು ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ನಿವಾಸಿಗಳು ಎಂದು ತಿಳಿದು ಬಂದಿದೆ. ಸದ್ಯ ಇವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 294 (ಅಶ್ಲೀಲ ಕಾಯ್ದೆ), 323 (ನೋವು ಉಂಟುಮಾಡುವುದು), 341 (ತಪ್ಪು ಸಂಯಮ) ಮತ್ತು 506 (ಅಪರಾಧ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ (ತಡೆಗಟ್ಟುವಿಕೆ) ಕಾಯ್ದೆ ಅಡಿ ಸಹ ಮೂವರು ಹಲ್ಲೆಕೋರರ ಮೇಲೆ ಕೇಸ್​ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ:ಬುಡಕಟ್ಟು ಮಹಿಳೆ ಮೇಲೆ 11 ಮಂದಿಯಿಂದ ಸಾಮೂಹಿಕ ಅತ್ಯಾಚಾರ: ಒಬ್ಬ ಪೊಲೀಸ್​ ವಶಕ್ಕೆ

Last Updated : Jul 12, 2023, 7:56 PM IST

ABOUT THE AUTHOR

...view details