ಹೈದರಾಬಾದ್:ಇಲ್ಲಿನಶಂಶಾಬಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆಯ ಇಮೇಲ್ ಬಂದಿದ್ದು, ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ವಿನೋದ್, ತಿರುಪತಿ ಮತ್ತು ರಾಕೇಶ್ ಆರೋಪಿಗಳು. ಹೈದರಾಬಾದ್-ದುಬೈ ವಿಮಾನವನ್ನು ಹೈಜಾಕ್ ಮಾಡುವುದಾಗಿ ಆರೋಪಿಗಳು ಇಮೇಲ್‌ನಲ್ಲಿ ತಿಳಿಸಿದ್ದರು. ವಿಮಾನ ಇನ್ನೇನು ಟೇಕ್‌ಆಫ್ ಆಗಬೇಕೆನ್ನುವಷ್ಟರಲ್ಲಿ ತಕ್ಷಣ ಹಾರಾಟ ಸ್ಥಗಿತಗೊಳಿಸಲಾಗಿತ್ತು.
ನಂತರ ಎಲ್ಲ ಪ್ರಯಾಣಿಕರನ್ನು ತಪಾಸಣೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮೂವರು ಪ್ರಯಾಣಿಕರು ಕೃತ್ಯ ಎಸಗಿರುವ ಬಗ್ಗೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಆರೋಪಿಗಳು ದುಬೈ ಮೂಲಕ ಇರಾಕ್‌ಗೆ ತೆರಳುತ್ತಿದ್ದರು. ಸದ್ಯ ವಿಮಾನ ನಿಲ್ದಾಣದ ಪೊಲೀಸರಿಗೆ ಒಪ್ಪಿಸಲಾಗಿದೆ. ನಿಗದಿಯಾಗಿದ್ದ ವಿಮಾನ ಹಾರಾಟ ರದ್ದುಗೊಳಿಸಲಾಗಿದ್ದು ಪರ್ಯಾಯವಾಗಿ ಮತ್ತೊಂದು ವಿಮಾನದಲ್ಲಿ ಪ್ರಯಾಣಿಕರನ್ನು ದುಬೈಗೆ ಕಳುಹಿಸಲಾಯಿತು ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 40 ದಿನಗಳಲ್ಲಿ ಶಂಶಾಬಾದ್ ವಿಮಾನ ನಿಲ್ದಾಣಕ್ಕೆ ಇಂತಹ ಬೆದರಿಕೆ ಇಮೇಲ್ ಬಂದಿರುವುದು ಇದು ಎರಡನೇ ಬಾರಿ. ಆಗಸ್ಟ್ 29 ರಂದು ಕೂಡಾ ದಾರಿಹೋಕರಿಂದ ಇಂಥದೇ ಮೇಲ್ ಬಂದಿತ್ತು. ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಎಂದು ತಿಳಿಸಲಾಗಿತ್ತು. ಕೂಡಲೇ ಎಚ್ಚೆತ್ತ ವಿಮಾನ ನಿಲ್ದಾಣದ ಸಿಬ್ಬಂದಿ, ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸಿಐಎಸ್ಎಫ್ ತಂಡ ಪರಿಶೀಲನೆ ನಡೆಸಿತ್ತು. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದ ಸಹಾಯದಿಂದ ಇಡೀ ವಿಮಾನ ನಿಲ್ದಾಣವನ್ನು ಶೋಧಿಸಲಾಗಿತ್ತು. ಸುಮಾರು ಒಂದು ಗಂಟೆ ಹುಡುಕಾಟ ನಡೆಸಿದರೂ ಯಾವುದೇ ಬಾಂಬ್ ಪತ್ತೆಯಾಗದ ಕಾರಣ ಹುಸಿ ಕರೆ ಎಂಬ ನಿರ್ಧಾರಕ್ಕೆ ಬರಲಾಗಿತ್ತು. ನಂತರ, ಏರ್‌ಪೋರ್ಟ್ ಆಪರೇಷನ್ ಕಂಟ್ರೋಲ್ ಸೆಂಟರ್‌ನಲ್ಲಿ ಸ್ವೀಕರಿಸಿದ ಇಮೇಲ್ ಐಡಿಯ ವಿವರಗಳೊಂದಿಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಮೇಲ್ ತನಿಖೆ ಆರಂಭಿಸಿದ್ದರು.