ನಾಗ್ಪುರ(ಮಹಾರಾಷ್ಟ್ರ): ನಾಗ್ಪುರದಲ್ಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಮಂಗಳವಾರ ಬೆಳಗ್ಗೆ ಸತತ ಮೂರು ಬೆದರಿಕೆ ಕರೆಗಳು ಬಂದಿದ್ದವು. ಈ ಬಗ್ಗೆ ಪೊಲೀಸರು ತಕ್ಷಣ ಗಮನ ಹರಿಸಿದ್ದು, ತನಿಖೆ ಆರಂಭಿಸಿದ್ದಾರೆ. ಇದರ ನಡುವೆ ನಾಗ್ಪುರ ಪೊಲೀಸರ ತಂಡ ಇಂದು(ಬುಧವಾರ) ಬೆಳಗಾವಿಗೆ ಆಗಮಿಸಿ ಪರಿಶೀಲನೆ ನಡೆಸಿದೆ. ಮತ್ತೊಂದೆಡೆ ಈ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ಬೆಂಗಳೂರಿನ ಯುವತಿಯನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಸದ್ಯ ಯುವತಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಿಳಿದುಬಂದಿದೆ.
ಬೆಂಗಳೂರಿಗೂ ಬೆದರಿಕೆ ಕರೆಯ ನಂಟು? : ಈ ವಿಚಾರವಾಗಿ ನಾಗ್ಪುರ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಮಾತನಾಡಿ, ಪ್ರಾಥಮಿಕ ತನಿಖೆಯಲ್ಲಿ ಯುವತಿ ಭಾಗಿಯಾಗಿರುವುದು ಪತ್ತೆಯಾಗದ ಕಾರಣ ಆಕೆಯನ್ನು ಇನ್ನೂ ವಶಕ್ಕೆ ಪಡೆದಿಲ್ಲ ಎಂದು ಹೇಳಿದರು. ಮಂಗಳವಾರ ಬೆಳಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಸುಲಿಗೆಗೆ ಒತ್ತಾಯಿಸಿ ಮೂರು ಬೆದರಿಕೆ ಕರೆಗಳು ಬಂದ ನಂತರ ನಾಗ್ಪುರ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಸುಲಿಗೆ ಪ್ರಕರಣದ ಆರೋಪಿಗಳ ಶೋಧ ಕಾರ್ಯಕ್ಕಾಗಿ ಪೊಲೀಸರು ಇಂದು ಬೆಳಗಾವಿ ಜೈಲಿಗೆ ಬಂದಿದ್ದರು. ಇದೇ ವೇಳೆ ಈ ಪ್ರಕರಣದಲ್ಲಿ ಬೆಂಗಳೂರಿಗೂ ಸಂಬಂಧ ಇರುವುದು ಬಯಲಾಗಿದ್ದು, ಯುವತಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳಿದ್ದಾರೆ.
ಏನಿದು ಪ್ರಕರಣ: ನಾಗ್ಪುರದ ಖಮ್ಲಾದಲ್ಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಮಂಗಳವಾರ ಬೆಳಗ್ಗೆ ಮೂರು ಬೆದರಿಕೆ ಕರೆಗಳು ಬಂದಿದ್ದವು. ಜಯೇಶ್ ಕಾಂತ ಅಲಿಯಾಸ್ ಪೂಜಾರಿ ಹೆಸರಿನಲ್ಲಿ ಬೆದರಿಕೆ ಕರೆಗಳು ಬಂದಿದ್ದವು. ಈ ವೇಳೆ ಆರೋಪಿಗಳು 10 ಕೋಟಿ ರೂ. ನೀಡುವಂತೆ ಬೆದರಿಸಿದ್ದರು. ಈ ಕರೆಯೂ ಬೆಂಗಳೂರಿನ ಯುವತಿಯ ಮೊಬೈಲ್ ಫೋನ್ ನಿಂದ ಬಂದಿದೆ. ಆದರೆ ಯುವತಿ ಈ ಕರೆಯನ್ನು ಮಾಡಲ್ಲ, ಆಕೆಯ ಸ್ನೇಹಿತ ಜಯೇಶ್ ಕಾಂತ ಅಲಿಯಾಸ್ ಪೂಜಾರಿ ಜೈಲಿನಲ್ಲಿ ಬಂಧಿಯಾಗಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿ ತೀವ್ರವಾಗಿ ತನಿಖೆ ನಡೆಸುತ್ತಿದ್ದಾರೆ.