ಮುಜಾಫರ್‌ನಗರ (ಉತ್ತರ ಪ್ರದೇಶ): ಭಾರತೀಯ ಕಿಸಾನ್ ಯೂನಿಯನ್‌ನ ರಾಷ್ಟ್ರೀಯ ವಕ್ತಾರ ಚೌಧರಿ ರಾಕೇಶ್ ಟಿಕಾಯತ್ ಅವರ ಮೊಬೈಲ್ ಫೋನ್‌ಗೆ ಮಗದೊಮ್ಮೆ ಕೊಲೆ ಬೆದರಿಕೆ ಬಂದಿದೆ. ಕೊಲೆ ಬೆದರಿಕೆ ಹಾಕಿರುವ ಆರೋಪಿಯು ಕರ್ನಾಟಕಕ್ಕೆ ಬಂದರೆ ನಿಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಮುಜಾಫರ್‌ನಗರದ ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ನಗರದ ಹೊಸ ಮಂಡಿಯ ಕಲ್ಯಾಣಪುರಿ ಮೊಹಲ್ಲಾದ ನಿವಾಸಿ ಹಾಗೂ ಯೂನಿಯನ್‌ನ ಕಾರ್ಯಕರ್ತ ಧೀರೇಂದ್ರ ಜವಳ ಅವರು ಈ ಬಗ್ಗೆ ದೂರು ನೀಡಿದ್ದಾರೆ.
''ಆಗಸ್ಟ್ 28 ರಂದು ಯಾರೋ ಅಪರಿಚಿತನೊಬ್ಬ ಚೌಧರಿ ರಾಕೇಶ್ ಟಿಕಾಯತ್ ಅವರಿಗೆ ಕರೆ ಮಾಡುವ ಮೂಲಕ ಬೆದರಿಕೆ ಹಾಕಿದ್ದಾರೆ. ಕರ್ನಾಟಕಕ್ಕೆ ಬಂದರೆ ನೀವು ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಾಟ್ಸ್ಆ್ಯಪ್ನಲ್ಲಿ ಸಂದೇಶ ಕಳುಹಿಸುವ ಮೂಲಕ ಆತ ಬೆದರಿಕೆ ಹಾಕಿದ್ದಾನೆ'' ಎಂದು ಧೀರೇಂದ್ರ ಅವರು ದೂರು ಪ್ರತಿಯಲ್ಲಿ ಉಲ್ಲೇಖ ಮಾಡಿದ್ದಾರೆ. ''ಪ್ರಕರಣದ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಪೊಲೀಸರು ಸೂಕ್ತ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಬೆದರಿಕೆ ಹಾಕಲು ಬಳಸಿದ್ದ ಮೊಬೈಲ್ ನಂಬರ್ ಅನ್ನು ನಮೂದಿಸಿ ಪೊಲೀಸರು ಸಿವಿಲ್ ಲೈನ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿರುವುದಾಗಿಯೂ'' ಅವರು ತಿಳಿಸಿದ್ದಾರೆ.
ರೈತ ಮುಖಂಡ ರಾಕೇಶ್ ಟಿಕಾಯತ್ ಅವರಿಗೆ ಈ ಹಿಂದೆಯೂ ಹಲವು ಬಾರಿ ಬೆದರಿಕೆಗಳು ಬಂದಿದ್ದವು. ಇದೀಗ ಮತ್ತೆ ಅಂತಹದ್ದೇ ಬೆದರಿಕೆ ಕರೆ ಬಂದಿದೆ. ಮೇ 5ರಂದು ಅವರಿಗೆ ಜೀವ ಬೆದರಿಕೆ ಕರೆ ಬಂದಿತ್ತು. ಈ ಬಗ್ಗೆಯೂ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು, ಹರಿಯಾಣದ ಪಾಣಿಪತ್ ನಿವಾಸಿ ಕುಶ್ ರಾಣಾ ಎಂಬಾತನ ಹೆಸರನ್ನು ಉಲ್ಲೇಖ ಮಾಡಿ ಆಗಸ್ಟ್‌ನಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಕೂಡ ಸಲ್ಲಿಸಿದ್ದರು.
ಅದಕ್ಕೂ ಮೊದಲು ಮಾರ್ಚ್ 10 ರಂದು ಯೂನಿಯನ್‌ನ ಅಧ್ಯಕ್ಷ ನರೇಶ್ ಟಿಕಾಯತ್ ಅವರ ಮಗ ಗೌರವ್ ಟಿಕಾಯಿತ್ ಅವರ ಮೊಬೈಲ್‌ಗೆ ಯಾರೋ ಕರೆ ಮಾಡಿ ಇಡೀ ಕುಟುಂಬವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದರು. ಈ ಸಂಬಂಧ ಭೌರಕಲ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಈ ಮೊದಲು, ಏಪ್ರಿಲ್ 2021 ಮತ್ತು ಮಾರ್ಚ್ 2022 ಸೇರಿದಂತೆ ಹಲವು ಬಾರಿ ಅವರಿಗೆ ಇದೇ ರೀತಿ ಬೆದರಿಕೆಗಳು ಬಂದಿದೆ.
ಈ ಬೆದರಿಕೆ ಕರೆ ಬಗ್ಗೆ ಸದ್ಯ ನೀಡಲಾದ ದೂರು ಆಧಾರದ ಹಿನ್ನೆಲೆ ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆಗಾಗಿ ತಂಡವನ್ನು ರಚಿಸಲಾಗಿದ್ದು ಶೀಘ್ರವೇ ಬಂಧಿಸಲಾಗುವುದು ಎಂದು ಸಿಒ ಸಿಟಿ ಎಸ್ಪಿ ಆಯುಷ್ ವಿಕ್ರಮ್ ಸಿಂಗ್ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಸಾಹಿತಿಗಳಿಗೆ ರಕ್ಷಣೆ ನೀಡುವ ಸಿದ್ದರಾಮಯ್ಯನವರ ನಿರ್ಧಾರ ಸ್ವಾಗತಿಸುತ್ತೇನೆ: ಪ್ರೊ.ಕೆ.ಎಸ್.ಭಗವಾನ್