ಚೆನ್ನೈ:ಲಿಖಿತ ಪರೀಕ್ಷೆ ಇಲ್ಲದೆಯೇ ಕೇವಲ ಅಂಕಗಳ ಆಧಾರದ ಮೇಲೆ ಭರ್ತಿ ಮಾಡಬಹುದಾದ ಉದ್ಯೋಗಗಳಿಗೆ ನಕಲಿ ಅಂಕಪಟ್ಟಿ ಸಲ್ಲಿಸಿ, ಸಾವಿರಾರು ಅಭ್ಯರ್ಥಿಗಳು ನೇಮಕಗೊಂಡಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ತಮಿಳುನಾಡಿನಲ್ಲಿ ಈ ಪ್ರಕರಣ ನಡೆದಿದ್ದು ಅಲ್ಲಿನ ಶಿಕ್ಷಣ ಇಲಾಖೆಗೆ ಆಘಾತ ಉಂಟಾಗಿದೆ.
ತಮಿಳುನಾಡು ಪರೀಕ್ಷಾ ಇಲಾಖೆಯ ರೀತಿಯಲ್ಲೇ ನಕಲಿ ಅಂಕಪಟ್ಟಿ ಮುದ್ರಿಸಿ, ಅಂಚೆ ಇಲಾಖೆ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಡಿ ವಿವಿಧ ಉದ್ಯೋಗಗಳ ನೇಮಕಾತಿಗೆ ಅಭ್ಯರ್ಥಿಗಳು ಸಲ್ಲಿಸಿದ್ದಾರೆ. ಈ ಅಂಕಪಟ್ಟಿಗಳ ಪರಿಶೀಲನೆಗೋಸ್ಕರ ರಾಜ್ಯ ಪರೀಕ್ಷಾ ಇಲಾಖೆಗೆ ರವಾನೆ ಮಾಡಿದಾಗ ಸತ್ಯಾಂಶ ಹೊರಬಿದ್ದಿದೆ. ಕೇಂದ್ರ ಸರ್ಕಾರದ ಅಧೀನದ ತೈಲ ಕಂಪನಿ, ಬ್ಯಾಂಕ್‌ಗಳು ಸೇರಿದಂತೆ ಅನೇಕ ಇಲಾಖೆಗಳು ಆಕಾಂಕ್ಷಿಗಳು ನಕಲಿ ಅಂಕಪಟ್ಟಿಗಳನ್ನೇ ನೀಡಿ, ಕೆಲಸ ಗಿಟ್ಟಿಸಿಕೊಂಡಿದ್ದಾರೆ.