ಪಾಲನ್‌ಪುರ (ಗುಜರಾತ್): ಗೋಶಾಲೆಗಳ ನಿರ್ವಹಣೆಗೆ 500 ಕೋಟಿ ರೂಪಾಯಿ ಆರ್ಥಿಕ ನೆರವು ನೀಡುವಲ್ಲಿ ಗುಜರಾತ್ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ 200ಕ್ಕೂ ಹೆಚ್ಚು ಪಿಂಜರಪೊಲ್ (ಗೋಶಾಲೆ) ಟ್ರಸ್ಟಿಗಳು ಸಾವಿರಾರು ಹಸುಗಳನ್ನು ರಸ್ತೆಗೆ ಬಿಟ್ಟಿದ್ದಾರೆ. ಇದರಿಂದ ಶುಕ್ರವಾರ ಉತ್ತರ ಗುಜರಾತ್ ಹೆದ್ದಾರಿಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.
2022-23ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಭರವಸೆ ನೀಡಿದಂತೆ ಆರ್ಥಿಕ ನೆರವು ನೀಡುವಂತೆ ಒತ್ತಾಯಿಸಿ ಕಳೆದ 15 ದಿನಗಳಿಂದ ಟ್ರಸ್ಟಿಗಳು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಬನಸ್ಕಾಂತ ಪಿಂಜರಪೊಲ್ ಟ್ರಸ್ಟಿ ಕಿಶೋರ್ ದವೆ ತಿಳಿಸಿದ್ದಾರೆ.
ಅನುದಾನ ಬಿಡುಗಡೆ ಸಂಬಂಧ ಅನೇಕ ಬಾರಿ ಮನವಿ ಮಾಡಲಾಗಿದೆ. ಆದರೆ, ಮನವಿ ಸರ್ಕಾರದ ಕಿವಿಗೆ ಕೇಳುತ್ತಿಲ್ಲ. ಹೀಗಾಗಿಯೇ ಗುರುವಾರ ಉತ್ತರ ಗುಜರಾತ್‌ನ ಸರ್ಕಾರಿ ಆವರಣದ ಹೊರತಾಗಿಯೂ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾವಿರಾರು ಹಸುಗಳನ್ನು ಬಿಟ್ಟು ಸರ್ಕಾರದ ಪ್ರತಿಭಟನೆ ನಡೆಸಲಾಗುತ್ತಿದೆ.
ಗುಜರಾತ್ ರಾಜ್ಯದಲ್ಲಿ 1,500 ಪಂಜರಪೊಲ್ಗಳಲ್ಲಿ ಸುಮಾರು 4.5 ಲಕ್ಷ ಹಸುಗಳಿಗೆ ಆಶ್ರಯ ನೀಡಲಾಗಿದೆ. ಬನಸ್ಕಾಂತದಲ್ಲಿರುವ 170 ಪಂಜರಪೋಲ್ಗಳಲ್ಲಿ 80,000 ಹಸುಗಳಿಗೆ ಇವೆ. ಪ್ರತಿ ಒಂದು ಜಾನುವಾರಿಗೆ ಆಹಾರಕ್ಕಾಗಿ ದಿನಕ್ಕೆ 60 ರಿಂದ 70 ರೂ. ಭರಿಸಬೇಕಿದೆ. ಕೋವಿಡ್ ನಂತರ ಪಂಜರಪೋಲ್ಗಳ ದೇಣಿಗೆ ಬರಿದಾಗಿದೆ. ಅನುದಾನವಿಲ್ಲದೇ ಇವುಗಳನ್ನು ನಡೆಸುವುದೇ ಕಷ್ಟಕರವಾಗುತ್ತಿದೆ. ಸರ್ಕಾರ ಆದಷ್ಟು ಬೇಗ ಹಣ ಬಿಡುಗಡೆ ಮಾಡದಿದ್ದರೆ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ ಎಂದೂ ಕಿಶೋರ್ ದವೆ ಎಚ್ಚರಿಸಿದ್ದಾರೆ.
ಇದನ್ನೂ ಓದಿ:ಜಾನುವಾರು ಕಳ್ಳಸಾಗಣೆ ಪ್ರಕರಣ: ಟಿಎಂಸಿ ನಾಯಕ ಅನುಬ್ರತಾ ಪುತ್ರಿ ಸುಕನ್ಯಾಗೂ ಸಿಬಿಐ ಸಮನ್ಸ್