ನವದೆಹಲಿ: ಇಂದಿನಿಂದ ಆರಂಭವಾಗಿರುವ ಸಾಮಾನ್ಯವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (ಸಿಯುಇಟಿ)ಗೆ ಕೇಂದ್ರಗಳ ಬದಲಾವಣೆಯಿಂದ ಹಾಜರಾಗದ ಅಭ್ಯರ್ಥಿಗಳಿಗೆ ಆಗಸ್ಟ್ ತಿಂಗಳಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆಯುವ ಅವಕಾಶ ನೀಡಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಇಟಿ) ತಿಳಿಸಿದೆ.
ಪದವಿಪೂರ್ವ ಕೋರ್ಸ್‌ಗಳ ಪ್ರವೇಶಕ್ಕಾಗಿ ಇಂದಿನಿಂದ ಸಿಯುಇಟಿ ಆರಂಭವಾಗಿದೆ. ಇದು ದೇಶದ ಎರಡನೇ ಅತಿ ದೊಡ್ಡ ಪರೀಕ್ಷೆಯಾಗಿದ್ದು, ದೇಶದ 500ಕ್ಕೂ ಹೆಚ್ಚು ನಗರಗಳು ಮತ್ತು ವಿದೇಶದ 10 ನಗರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸುಮಾರು 14.90 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.
ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರುವುದರಿಂದ ವರ ಅನುಕೂಲಕ್ಕಾಗಿ ಪರೀಕ್ಷೆಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತಿದೆ. ಮೊದಲ ಹಂತದ ಪರೀಕ್ಷೆಯು ಜುಲೈ 15, 16, 19 ಮತ್ತು 20ರಂದು ನಡೆಯಲಿದೆ. ಎರಡನೇ ಹಂತವು ಆಗಸ್ಟ್ 4, 5, 6, 7, 8 ಮತ್ತು 10ರಂದು ನಡೆಯಲಿದೆ. ಇದು ಆರಂಭವಾಗಿರುವ ಮೊದಲ ಹಂತದ ಮೊದಲ ಪರೀಕ್ಷೆಯು ಬೆಳಗ್ಗೆ 9ರಿಂದ ಮಧ್ಯಾಹ್ನ 12.15ರವರೆಗೆ ನಡೆದಿದೆ. ಎರಡನೇ ಪರೀಕ್ಷೆ ಮಧ್ಯಾಹ್ನ 3 ರಿಂದ ಸಂಜೆ 6.45ರವರೆಗೆ ಇರುತ್ತದೆ.
ಎರಡು ಕಡೆ ಪರೀಕ್ಷೆ ರದ್ದು:ಇಂದು ಬೆಳಗ್ಗೆ ಆರಂಭವಾದ ಮೊದಲ ಹಂತದ ಪರೀಕ್ಷೆಗೆ ಕೆಲ ರಾಜ್ಯಗಳಲ್ಲಿ ಗೊಂದಲದ ಗೂಡಾಗಿತ್ತು. ಕೆಲವೆಡೆ ಏಕಾಏಕಿ ಪರೀಕ್ಷಾ ಕೇಂದ್ರಗಳನ್ನೇ ಬದಲಾಯಿಸಲಾಗಿತ್ತು. ಇದರಿಂದ ಕೊನೆಯ ಹಂತದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾದರು. ಇದು ವಿದ್ಯಾರ್ಥಿಗಳು ಮತ್ತು ಪೋಷಕರ ಆಕ್ರೋಶಕ್ಕೂ ಕಾರಣವಾಗಿದೆ.