ನವದೆಹಲಿ: ಪ್ರಸ್ತುತ ಜಾರಿ ನಿರ್ದೇಶನಾಲಯದ ಮುಖ್ಯಸ್ಥ ಸಂಜಯ್ ಕುಮಾರ್ ಮಿಶ್ರಾ ಅವರಿಗೆ ನೀಡಲಾದ ಸೇವಾ ವಿಸ್ತರಣೆಯ ಕಾನೂನುಬದ್ಧತೆ ಬಗ್ಗೆ ಸುಪ್ರೀಂಕೋರ್ಟ್ ತೀರ್ಪನ್ನು ಸಂಭ್ರಮಿಸುತ್ತಿರುವ ಪ್ರತಿಪಕ್ಷಗಳ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.
ಅಮಿತ್ ಶಾ ತಮ್ಮ ಸುದೀರ್ಘ ಟ್ವೀಟ್‌ನಲ್ಲಿ, "ಇಡಿ ಪ್ರಕರಣದ ಬಗ್ಗೆ ಗೌರವಾನ್ವಿತ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಸಂತಸ ಪಡುವವರು ವಿವಿಧ ಕಾರಣಗಳಿಗಾಗಿ ಭ್ರಮನಿರಸನಗೊಂಡಿದ್ದಾರೆ. ಸಂಸತ್ತು ಅಂಗೀಕರಿಸಿದ ಸಿವಿಸಿ ಕಾಯ್ದೆಯ ತಿದ್ದುಪಡಿಗಳನ್ನು ಎತ್ತಿ ಹಿಡಿಯಲಾಗಿದೆ. ಇಡಿ ಒಬ್ಬ ವ್ಯಕ್ತಿಯನ್ನು ಮೀರಿದ ಸಂಸ್ಥೆಯಾಗಿದೆ ಮತ್ತು ಅದರ ಪ್ರಮುಖ ಉದ್ದೇಶವನ್ನು ಸಾಧಿಸುವತ್ತ ಗಮನ ಹರಿಸಿದೆ. ಅಂದರೆ ಮನಿ ಲಾಂಡರಿಂಗ್ ಅಪರಾಧಗಳು ಮತ್ತು ವಿದೇಶಿ ವಿನಿಮಯ ಕಾನೂನುಗಳ ಉಲ್ಲಂಘನೆಯನ್ನು ತನಿಖೆ ಮಾಡುವುದು ಇಡಿ ಕೆಲಸವಾಗಿದೆ. ಹೀಗಾಗಿ, ಇಡಿ ನಿರ್ದೇಶಕರು ಯಾರು ಎಂಬುದು ಮುಖ್ಯವಲ್ಲ, ಏಕೆಂದರೆ ಈ ಪಾತ್ರವನ್ನು ಯಾರು ವಹಿಸಿಕೊಂಡರೂ ಅವರ ಕರ್ತವ್ಯ ನಿಭಾಯಿಸಬೇಕಾಗುತ್ತದೆ ಎಂದಿದ್ದಾರೆ.
ಏನಿದು ಪ್ರಕರಣ:ಮಿಶ್ರಾ ಅಧಿಕಾರವಧಿಯನ್ನು ತಲಾ ಒಂದು ವರ್ಷದ ವಿಸ್ತರಣೆ ಮಾಡಲಾಗಿತ್ತು. ನವೆಂಬರ್ 17, 2021 ಮತ್ತು ನವೆಂಬರ್ 17, 2022ರ ಆದೇಶಗಳು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ ಮತ್ತು ಅವರ ಅಧಿಕಾರಾವಧಿಯನ್ನು ಜುಲೈ 31 ಕ್ಕೆ ಮೊಟಕುಗೊಳಿಸಿದೆ. 1984ರ ಬ್ಯಾಚ್ನ ಐಆರ್ಎಸ್ ಅಧಿಕಾರಿ, ಆಗಿದ್ದ ಮಿಶ್ರಾ ನವೆಂಬರ್ 18, 2023 ರವರೆಗೆ ಅಧಿಕಾರದಲ್ಲಿರಬೇಕಿತ್ತು. ಆದರೆ, ಇಡಿ ನಿರ್ದೇಶಕರ ಅಧಿಕಾರಾವಧಿಯನ್ನು ಗರಿಷ್ಠ ಐದು ವರ್ಷಗಳವರೆಗೆ ವಿಸ್ತರಿಸಲು ಕೇಂದ್ರ ವಿಚಕ್ಷಣಾ ಆಯೋಗ ಕಾಯ್ದೆ ಮತ್ತು ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿತ್ತು.