ಚಮೋಲಿ: ಉತ್ತರಾಖಂಡದ ಚಮೋಲಿಯಲ್ಲಿರುವ ಚಾರ್‌ಧಾಮ್ ಯಾತ್ರೆಗೆ ಇಂದು ತೆರೆ ಬಿದ್ದಿದೆ. ಚಳಿಗಾಲದ ಹಿನ್ನೆಲೆ ಹಿಂದೂಗಳ ಪವಿತ್ರ ಧಾರ್ಮಿಕ ಸ್ಥಳವಾದ ಬದರಿನಾಥ್ ಧಾಮ್‌ನಲ್ಲಿ ಇಂದು ಅಂದರೆ ಶನಿವಾರ ಬಾಗಿಲು ಮುಚ್ಚಿದೆ.
ಇದಕ್ಕೂ ಮುನ್ನವೇ ಸಾವಿರಾರು ಭಕ್ತರು ಬದರಿನಾಥ ಧಾಮ ಭೇಟಿ ನೀಡಿ ದೇವರ ದರ್ಶನ ಪಡೆದರು. ಚಳಿಗಾಲದ ಹಿನ್ನೆಲೆ ಬದ್ರಿನಾಥನಿಗೆ ತುಪ್ಪದಲ್ಲಿ ನೆನೆಸಿದ ಉಣ್ಣೆಯ ಹೊದಿಕೆ ಹೊದಿಸಲಾಗುತ್ತದೆ ಎಂದು ಬದರಿನಾಥ ಧಾಮದ ಮಾಜಿ ಧರ್ಮಾಧಿಕಾರಿ ಭುವನ್ ಚಂದ್ರ ಉನಿಯಾಲ್ ತಿಳಿಸಿದ್ದಾರೆ.
ಮಾಣ ಗ್ರಾಮದ ಮಂಗಲ್ ದಳದ ಮಹಿಳೆಯರು ವಿಶೇಷವಾಗಿ ಈ ಉಣ್ಣೆಯ ತುಪ್ಪದ ಹೊದಿಕೆಯನ್ನು ಸಿದ್ಧಪಡಿಸಿದ್ದಾರೆ. ದೇವಸ್ಥಾನದ ಪ್ರಧಾನ ಅರ್ಚಕ ಈಶ್ವರಿ ಪ್ರಸಾದ್ ನಂಬೂದಿರಿ ದೇವರಿಗೆ ಕಂಬಳಿ ಸಮರ್ಪಿಸಿದರು. ಉದ್ಧವ್ ಮತ್ತು ಕುಬೇರರ ವಿಗ್ರಹಗಳ ಜೊತೆಗೆ ಬದರಿನಾಥ ಧಾಮದ ಗರ್ಭಗುಡಿಯಲ್ಲಿ ಲಕ್ಷ್ಮಿ ದೇವತೆಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು.
ಬದರಿನಾಥ ಧಾಮದ ಬಾಗಿಲು ಮುಚ್ಚುವುದರೊಂದಿಗೆ, ಉತ್ತರಾಖಂಡದಲ್ಲಿರುವ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥ ಧಾಮಗಳ ಪ್ರಯಾಣವು ಈ ವರ್ಷಕ್ಕೆ ಕೊನೆಗೊಂಡಿದೆ. ಬದರಿನಾಥದ ಬಾಗಿಲು ಮುಚ್ಚಿದ ನಂತರ, ಉದ್ಧವ್ ಮತ್ತು ಕುಬರ್ಜಿಯ ಸಿಂಹಾಸನವು ಬಮಾನಿ ಗ್ರಾಮವನ್ನು ತಲುಪುತ್ತದೆ. ಶಂಕರಾಚಾರ್ಯಜಿ ಅವರ ಸಿಂಹಾಸನವು ಇಂದು ರಾತ್ರಿ ರಾವಲ್ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತದೆ.
ನಾಳೆ ಅಂದರೆ, ಭಾನುವಾರ ಪವಿತ್ರ ಸಿಂಹಾಸನ ಮತ್ತು ಉದ್ಧವ್-ಕುಬೇರ್ಜಿಯ ವಿಗ್ರಹವು ಪಾಂಡುಕೇಶ್ವರಕ್ಕೆ ಹೊರಡಲಿದೆ. ಶಂಕರಾಚಾರ್ಯರ ಸಿಂಹಾಸನವು ನವೆಂಬರ್ 21 ರಂದು ಜೋಶಿಮಠದ ನರಸಿಂಹ ದೇವಸ್ಥಾನವನ್ನು ತಲುಪಲಿದ್ದು, ಚಳಿಗಾಲದಲ್ಲಿ ಇಲ್ಲಿಯೇ ಇರುತ್ತದೆ. ಈ ವರ್ಷ 17.5 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಭಗವಾನ್ ಬದರಿನಾಥಕ್ಕೆ ಭೇಟಿ ನೀಡಿದ್ದಾರೆ. ಚಳಿಗಾಲದಲ್ಲಿ ಡಿಸೆಂಬರ್‌ನಿಂದ ಮೇ ತಿಂಗಳವರೆಗೆ ಹಿಮಪಾತ, ತೀವ್ರ ಚಳಿ ಹಿನ್ನಲೆ ದೇವಾಲಯವನ್ನು ಮುಚ್ಚಲಾಗುತ್ತದೆ.
ಇದನ್ನೂ ಓದಿ: ಹಿಮಪಾತಕ್ಕೆ ಸಿಲುಕಿ ಕರ್ತವ್ಯ ನಿರತ ಮೂವರು ಯೋಧರ ಸಾವು