ಅಹಮದಾಬಾದ್: ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ನಡೆಯಲಿರುವ 2022ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲು ಕಾಂಗ್ರೆಸ್ ಸ್ಟಾರ್ ಪ್ರಚಾರಕ ಕನ್ಹಯ್ಯಾ ಕುಮಾರ್ ಅಹಮದಾಬಾದ್‌ನಲ್ಲಿ ರೋಡ್ ಶೋನಲ್ಲಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಬಾರಿ ಗುಜರಾತಿನಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವ ಉತ್ತಮ ಅವಕಾಶಗಳಿದ್ದು, ಜನ ಬೆಂಬಲಕ್ಕೆ ಧನ್ಯವಾದ ಎಂದಿದ್ದಾರೆ.
ಕಳೆದ 27 ವರ್ಷಗಳಲ್ಲಿ ಗುಜರಾತ್‌ನಲ್ಲಿ ಕಾಂಗ್ರೆಸ್ ವಿರೋಧ ಪಕ್ಷವಾಗಿ ಸಮರ್ಥ ಪಾತ್ರ ವಹಿಸಿದೆ ಎಂದು ಕನ್ಹಯ್ಯಾ ಕುಮಾರ್ ಪ್ರತಿಪಾದಿಸಿದ್ದಾರೆ. ಈಗ ನಿರುದ್ಯೋಗ ಸಮಸ್ಯೆ, ಅಧಿಕ ವಿದ್ಯುತ್ ಬಿಲ್ ಮತ್ತು ರೈತರ ಸಾಲದ ಸಮಸ್ಯೆಗಳು ಕೊನೆಗೊಳ್ಳುವಂತೆ ರಾಜ್ಯದ ಜನರು ಬದಲಾವಣೆಯತ್ತ ಎದುರು ನೋಡುತ್ತಿದ್ದಾರೆ. ರಾಷ್ಟ್ರಕ್ಕೆ ಬದಲಾವಣೆಯ ಅಗತ್ಯ ಇದ್ದಾಗ ಗುಜರಾತ್ ನಾಗರಿಕರು ಬದಲಾವಣೆಯನ್ನು ಒದಗಿಸುವ ತಮ್ಮ ಸಾಮರ್ಥ್ಯ ಪ್ರದರ್ಶಿಸುತ್ತಾರೆ ಎಂದು ಅವರು ಹೇಳಿದ್ದಾರೆ.