ವಾರಣಾಸಿ(ಉತ್ತರ ಪ್ರದೇಶ):ಉತ್ತರಪ್ರದೇಶದ ವಾರಣಾಸಿ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. 8 ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳೇ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ ಮುಸ್ಲಿಂ ಮತದಾರರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳೇ ಸತತವಾಗಿ ಗೆಲುವು ಸಾಧಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆ ಹಲವು ರಾಜಕೀಯ ಪಕ್ಷಗಳ ಭವಿಷ್ಯವನ್ನು ನಿರ್ಧರಿಸಲಿದೆ. ಬಹುಶಃ ಇದೇ ಕಾರಣಕ್ಕಾಗಿಯೇ ಆಡಳಿತಾರೂಢ ಬಿಜೆಪಿ ಪಕ್ಷ ಅಳೆದು ತೂಗಿ ತನ್ನ ಅಭ್ಯರ್ಥಿಗಳನ್ನು ಘೋಷಿಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಂಸದರಾಗಿ ಪ್ರತಿನಿಧಿಸುವ ಕ್ಷೇತ್ರವಾದ ವಾರಣಾಸಿಯಲ್ಲಿ ಬರುವ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಒಂದಲ್ಲ, ಎರಡಲ್ಲ ಸತತ 8 ವಿಧಾನಸಭಾ ಚುನಾವಣೆಗಳಲ್ಲಿ ವಿಜಯ ಸಾಧಿಸುತ್ತಾ ಬಂದಿದ್ದಾರೆ.
ಪ್ರಸ್ತುತ ಈ ಕ್ಷೇತ್ರದ ಶಾಸಕ, ದತ್ತಿ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವರಾದ ನೀಲಕಂಠ ತಿವಾರಿ ಒಂದು ಬಾರಿ ಗೆದ್ದಿದ್ದರೆ, ಶ್ಯಾಮದೇವ್ ರೈ ಚೌಧರಿ ಈ ಕ್ಷೇತ್ರದಿಂದ 7 ಬಾರಿ ವಿಜಯ ಸಾಧಿಸಿದ್ದಾರೆ. ಇವರಿಗೆ ಬೇರೆ ಧರ್ಮದ ಮತಗಳಿಗಿಂತಲೂ ಮುಸ್ಲಿಂ ಮತಗಳೇ ಹೆಚ್ಚು ಚಲಾವಣೆಯಾಗಿದ್ದವು ಎಂಬುದು ವಿಶೇಷ.