ನವದೆಹಲಿ: 73ನೇ ಗಣರಾಜ್ಯೋತ್ಸವ ಮುನ್ನಾದಿನವಾದ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶವನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಕೋವಿಡ್ ಶಿಷ್ಟಾಚಾರ ಪಾಲನೆ ಇದೀಗ ರಾಷ್ಟ್ರಧರ್ಮವಾಗಿದ್ದು, ನಾವೆಲ್ಲರೂ ತಪ್ಪದೆ ಮಾರ್ಗಸೂಚಿ ಅನುಸರಿಸಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ ಎಂದು ತಿಳಿಸಿದರು.
ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರಾಣತೆತ್ತ ಮಹನೀಯರ ನೆನೆಯಬೇಕಾದ ದಿನ ಇದ್ದಾಗಿದ್ದು, ಸಾವಿರಾರು ಜನರ ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಸಂವಿಧಾನದಲ್ಲಿ ಉಲ್ಲೇಖವಾಗಿರುವ ಎಲ್ಲ ಕರ್ತವ್ಯ ಪಾಲಿಸುವುದು ನಮ್ಮ ಕರ್ತವ್ಯವಾಗಿದ್ದು, ದೇಶದಲ್ಲಿ ಸ್ವಚ್ಛತೆ ಕಾಪಾಡುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.
ಕೋವಿಡ್ ವಿರುದ್ಧದ ಹೋರಾಟ ಮುಂದುವರೆದಿದ್ದು, ಕಳೆದ ಎರಡು ವರ್ಷಗಳಿಂದಲೂ ನಾವು ಈ ಸೋಂಕಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಆದರೆ, ನಮ್ಮಲ್ಲೇ ನಿರ್ಮಾಣಗೊಂಡಿರುವ ಲಸಿಕೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ನಾವೆಲ್ಲರೂ ಹೆಮ್ಮೆ ಪಡಬೇಕು ಎಂದರು. ನಮ್ಮ ವೈದ್ಯರು, ದಾದಿಯರು ಹಾಗೂ ವೈದ್ಯಕೀಯ ಸಿಬ್ಬಂದಿ ಕೋವಿಡ್ ಸಂದರ್ಭದಲ್ಲಿ ಹಗಲು-ರಾತ್ರಿ ಕೆಲಸ ಮಾಡಿದ್ದು, ಅವರ ಶ್ರಮದಿಂದಲೇ ಇಂದು ಲಕ್ಷಾಂತರ ಜನರ ಪ್ರಾಣ ಉಳಿದಿದೆ ಎಂದು ತಿಳಿಸಿದರು.