ನವದೆಹಲಿ:ಪಾಕ್ ಆಕ್ರಮಿತ ಕಾಶ್ಮೀರವು ಭಾರತಕ್ಕೆ ಮರು ಸೇರ್ಪಡೆಯಾಗಬೇಕೆಂಬ ಕೂಗು ಜೋರಾಗಿದೆ. ಪಿಒಕೆ ವಶಕ್ಕೆ ಭಾರತೀಯ ಸೇನೆ ಸಿದ್ಧವಾಗಿದೆ ಎಂದು ಸೇನಾಧಿಕಾರಿ ಹೇಳಿಕೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕ ಹರೀಶ್ ರಾವತ್ ಅವರು ಬೆಂಬಲಿಸಿ "ಭಾರತ ತನಗೆ ಸೇರಬೇಕಿರುವ ಭೂಪ್ರದೇಶವನ್ನು ಹಿಂಪಡೆಯಲು ಇದು ಸಕಾಲವಾಗಿದೆ' ಎಂದಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಉತ್ತರಾಖಂಡ ಮಾಜಿ ಮುಖ್ಯಮಂತ್ರಿ, ಪಾಕಿಸ್ತಾನ ಪ್ರಸ್ತುತ ದುರ್ಬಲವಾಗಿದೆ. ಅದು ಆಕ್ರಮಿಸಿಕೊಂಡಿರುವ ಕಾಶ್ಮೀರದ ಪ್ರದೇಶಗಳನ್ನು ಮರು ಪಡೆಯಲು ಇದು ಸೂಕ್ತ ಸಮಯವಾಗಿದೆ. ಆ ದೇಶದ ಆಕ್ರಮಣದಿಂದ ಪಿಒಕೆಯನ್ನು ಮುಕ್ತಗೊಳಿಸುವುದು ನಮ್ಮ ಜವಾಬ್ದಾರಿಯಾಗಿದೆ. ಹಿಂದೆ ಕಾಂಗ್ರೆಸ್ ಆಡಳಿತದ ವೇಳೆ ಸಂಸತ್ತಿನಲ್ಲಿ ಈ ಬಗ್ಗೆ ನಿರ್ಣಯ ಅಂಗೀಕರಿಸಲಾಗಿತ್ತು. ಮೋದಿ ಸರ್ಕಾರ ತನ್ನ ಕಾರ್ಯಸೂಚಿಯಲ್ಲಿ ಸೇರಿಸಿಕೊಂಡು ಜಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸೇನಾಧಿಕಾರಿಗಳ ವಾಕ್ಸಮರ:ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯಲು ಆದೇಶ ಬಂದರೆ ಅದನ್ನು ಕಾರ್ಯಗತಗೊಳಿಸಲು ಭಾರತೀಯ ಸೇನೆ ಸಿದ್ಧವಿದೆ ಎಂದು ಭಾರತೀಯ ಸೇನೆಯ ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸೀಮ್ ಮುನೀರ್, ದೇಶದ ಮೇಲೆ ಭಾರತ ದಾಳಿ ಮಾಡಿದರೆ ಅದನ್ನು ಎದುರಿಸಲಾಗುವುದು. ತಾಯಿನಾಡಿನ ಒಂದಿಂಚು ಜಾಗವನ್ನು ಶತ್ರುರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ. ಯುದ್ಧ ಮಾಡಲೂ ಸಿದ್ಧ ಎಂದು ಹೇಳಿದ್ದರು.
ಇದಕ್ಕೂ ಮೊದಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಹಿಂಪಡೆಯುವ ಬಗ್ಗೆ ಮಾತನಾಡಿದ್ದರು. ಆ ಪ್ರದೇಶದ ಎಲ್ಲ ನಿರಾಶ್ರಿತರು ತಮ್ಮ ಭೂಮಿ ಮತ್ತು ಮನೆಗಳನ್ನು ಮರು ಪಡೆಯಲಿದ್ದಾರೆ ಎಂದು ಹೇಳಿದ್ದರು.
ಓದಿ:ಭಾರತ ದಾಳಿಗೆ ಮುಂದಾದರೆ ಯುದ್ಧಕ್ಕೆ ಸಿದ್ಧ: ಪಾಕ್ ಸೇನಾ ಮುಖ್ಯಸ್ಥ