ಒಡಿಶಾ: ಕಲೆಯೇ ಹಾಗೆ, ಅದು ಒಂದಿಲ್ಲೊಂದು ವೈವಿಧ್ಯತೆಯತ್ತ ಕಲಾವಿದನನ್ನು ಪ್ರಚೋದಿಸುತ್ತದೆ. ಒಡಿಶಾದಲ್ಲಿ ಟೈ ಅಂಡ್ ಡೈ ನೇಯ್ಗೆ ಬಲು ಹೆಸರುವಾಸಿ. ಇದನ್ನು ‘ಬಂಧಕಲಾ’ ಎಂದೂ ಕರೆಯುತ್ತಾರೆ. ಈ ನೇಯ್ಗೆಯ ಜನ್ಮಸ್ಥಳ ಎಂದು ಪರಿಗಣಿಸಲ್ಪಟ್ಟಿರುವ ಸುಬರ್ಣಾಪುರದ ಕೈಮಗ್ಗ ನೇಕಾರರು ತಮ್ಮ ನೇಯ್ಗೆಯಲ್ಲಿ ದೇಶಭಕ್ತಿ ಸಾರಿದ್ದಾರೆ. ಬಣ್ಣದ ಎಳೆಗಳಿಂದ ಮಾತೃ ಭೂಮಿಯ ಪ್ರೇಮವನ್ನು ಹೆಣೆದಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಭಾರತದ ನಕ್ಷೆಯನ್ನು ಈ ಸೀರೆಯೊಂದರಲ್ಲಿ ಸುಂದರವಾಗಿ ನೇಯಲಾಗಿದೆ. ಭವ್ಯ ಭಾರತದ ನಕ್ಷೆ ಸೇರಿದಂತೆ ದೇಶದ ಎಲ್ಲ ರಾಜ್ಯಗಳ ಹೆಸರುಗಳನ್ನು ಸೀರಿಯೆ ಅಂಚಿನಲ್ಲಿ ಮತ್ತು ಅದರ ದಡಿಯಲ್ಲಿ ಉತ್ತಮವಾದ ಎಳೆಗಳಿಂದ ನೇಯಲಾಗಿದೆ.
ಅಲ್ಲದೇ ರೈತರ ಮಹತ್ವ ಸಾರುವ ಘೋಷಣೆಗಳಾದ ಜೈ ಜವಾನ್, ಜೈ ಕಿಸಾನ್ ಎಂಬ ಸಂದೇಶವನ್ನು ಸೀರೆಯಲ್ಲಿ ಚಿತ್ರಿಸಿದ್ದಾರೆ. ಸುಬರ್ಣಾಪುರ ಜಿಲ್ಲೆಯ ದುಂಗುರಿಪಾಲಿಯ ಸಹಾಲಾ ಗ್ರಾಮದ ಟೈ ಮತ್ತು ಡೈ ನೇಕಾರ ಈಶ್ವರ್ ಮೆಹರ್ ಅವರು ಈ ಎಲ್ಲ ಚಿತ್ರಗಳನ್ನು ಸುಂದರವಾಗಿ ‘ಸೀರೆಯಲ್ಲಿ’ ಚಿತ್ರಿಸಿದ್ದಾರೆ. ಅವರ ವಿಶಿಷ್ಟ ಕಲ್ಪನೆಗೆ ನಿಜವಾದ ಆಕಾರ ನೀಡುವಲ್ಲಿ ಅವರ ಕುಟುಂಬ ಸದಸ್ಯರು ಸಹ ಸಂಪೂರ್ಣ ಸಹಕಾರ ನೀಡಿದ್ದಾರೆ. ಮತ್ತೊಂದೆಡೆ, ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಈ ನೇಕಾರರ ಕಲೆಯನ್ನು ಶ್ಲಾಘಿಸಿದ್ದಾರೆ.