ಕರ್ನಾಟಕ

karnataka

ETV Bharat / bharat

600 ಎಕರೆ ದಾನ ಮಾಡಿದ್ರು ಈ ತೆಲಂಗಾಣದ ಗಾಂಧಿ.. ಇಂದು ಕುಟುಂಬಕ್ಕಿಲ್ಲ ಆಸರೆ - ತೆಲಂಗಾಣದ ಗಾಂಧಿ

ನೂರಾರು ಎಕರೆ ಜಮೀನು ಹೊಂದಿದ್ದ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಭೂಪತಿ ಕೃಷ್ಣಮೂರ್ತಿಯವರ ಕುಟುಂಬ ಕಳೆದ ಕೆಲ ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ. ಭೂಪತಿ ಕೃಷ್ಣಮೂರ್ತಿ ಅವರು ಬದುಕಿದ್ದಾಗ ಪ್ರತ್ಯೇಕ ತೆಲಂಗಾಣ ರಾಜ್ಯ ಚಳವಳಿಗೆ ಸಲಹೆ ಕೇಳಿದವರು, ರಾಜ್ಯ ಆದಾಗ ಅದಕ್ಕೆ ಅವರೇ ಸ್ಫೂರ್ತಿ ಎಂದು ಹೊಗಳಿದವರು, ಅವರ ನಿಧನದ ನಂತರ ಅವರ ಕುಟುಂಬಕ್ಕೆ ಆಸರೆಯಾಗುತ್ತೇವೆ ಎಂದು ಭರವಸೆ ನೀಡಿದವರು ಈಗ ಆ ವಿಷಯವನ್ನೇ ಪ್ರಸ್ತಾಪಿಸುವುದಿಲ್ಲ.

600 ಎಕರೆ ದಾನ ಮಾಡಿದ್ರು ಈ ತೆಲಂಗಾಣದ ಗಾಂಧಿ.. ಇಂದು ಕುಟುಂಬಕ್ಕಿಲ್ಲ ಆಸರೆ
This Gandhi of Telangana donated 600 acres

By

Published : Aug 12, 2022, 1:25 PM IST

ಭಾರತದ ಸ್ವಾತಂತ್ರ್ಯ ಹೋರಾಟದ ಧ್ವನಿ ಎತ್ತಿದ ಭೂಪತಿ ಕೃಷ್ಣಮೂರ್ತಿಯವರು ತೆಲಂಗಾಣದ ಗಾಂಧಿ ಎಂದೇ ಜನಮಾನಸದಲ್ಲಿ ಖ್ಯಾತರಾಗಿದ್ದಾರೆ. ಹಿಂದಿನ ವಾರಂಗಲ್ ಜಿಲ್ಲೆಯ ಮುಲ್ಕನೂರಿನಲ್ಲಿ ಜನಿಸಿದ ಇವರಿಗೆ ಸುಮಾರು 600 ಎಕರೆಯಷ್ಟು ಭೂಮಿ ಪಿತ್ರಾರ್ಜಿತವಾಗಿ ಬಂದಿತ್ತು. ಆದರೆ, ತಮ್ಮ ಅಷ್ಟೂ ಭೂಮಿಯನ್ನು ಸ್ವಾತಂತ್ರ್ಯ ಹೋರಾಟ ಮತ್ತು ವಿಶೇಷ ತೆಲಂಗಾಣ ರಾಜ್ಯ ಚಳವಳಿಗಳಿಗೆ ದಾನ ಮಾಡಿದ ಮಹಾನುಭಾವ ಭೂಪತಿ ಕೃಷ್ಣಮೂರ್ತಿ.

ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಭೂಪತಿ ಕೃಷ್ಣಮೂರ್ತಿ

ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಮತ್ತು ಎನ್‌ಟಿಆರ್, ವರಂಗಲ್‌ನಿಂದ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಲು ಭೂಪತಿಯವರಿಗೆ ಟಿಕೆಟ್ ನೀಡಲು ಮುಂದಾಗಿದ್ದರು. ಆದರೆ, ತಾವು ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದ ಭೂಪತಿ ಕೃಷ್ಣಮೂರ್ತಿ ಟಿಕೆಟ್ ನಿರಾಕರಿಸಿದ್ದರು. ಆದರೆ, ವಿಚಿತ್ರ ಏನೆಂದರೆ- ಒಂದು ಕಾಲಕ್ಕೆ 600 ಎಕರೆ ಭೂಮಿಯ ಒಡೆಯರಾಗಿದ್ದ ಇಂಥ ದಾನಶೂರ ಹೋರಾಟಗಾರರ ಕುಟುಂಬ ಇಂದು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.

600 ಎಕರೆ ಒಡೆಯರಿಂದ.. ಬಾಡಿಗೆ ಮನೆ: ಅಂದು ನೂರಾರು ಎಕರೆ ಜಮೀನು ಹೊಂದಿದ್ದ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಭೂಪತಿ ಕೃಷ್ಣಮೂರ್ತಿಯವರ ಕುಟುಂಬ ಕಳೆದ ಕೆಲ ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ. ಅವರ ಮಗ ಶ್ಯಾಮಸುಂದರ್‌ಗೆ ಇಬ್ಬರು ಗಂಡು ಮತ್ತು ಒಬ್ಬ ಮಗಳು. 2015ರಲ್ಲಿ ಭೂಪತಿ ಕೃಷ್ಣಮೂರ್ತಿ ನಿಧನರಾದ ಬಳಿಕ ಕುಟುಂಬ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ಅಲ್ಲಿಯವರೆಗೂ ಬರುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಸ್ಥಗಿತಗೊಂಡಿದ್ದರಿಂದ ಮನೆ ಬಾಡಿಗೆ ಕಟ್ಟಲೂ ಸಾಧ್ಯವಾಗದ ಪರಿಸ್ಥಿತಿ ಕುಟುಂಬಕ್ಕೆ ಎದುರಾಗಿದೆ. ಶ್ಯಾಮಸುಂದರ್ ನವೆಂಬರ್ 2020 ರಲ್ಲಿ ಮತ್ತು ಅವರ ಪತ್ನಿ ವಸುಂಧರಾ ಮೇ 2021 ರಲ್ಲಿ ನಿಧನರಾದರು. ಅಂದಿನಿಂದ ಕುಟುಂಬದ ಸಂಪೂರ್ಣ ಹೊರೆ ಮಗ ಭೂಪತಿ ಪುನ್ನಂಚಂದರ್ ಅವರ ಮೇಲೆ ಬಿದ್ದಿತು.

ಮತ್ತೊಬ್ಬ ಪುತ್ರ ಶ್ರೀಚಂದ್ ಮಾನಸಿಕ ಅಸ್ವಸ್ಥನಾಗಿದ್ದಾನೆ. ಈತನ ಜವಾಬ್ದಾರಿಯನ್ನು ಕೂಡ ಪುನ್ನಂಚಂದರ್ ಅವರೇ ವಹಿಸಿಕೊಳ್ಳಬೇಕಾಯಿತು. ಸಿಕೆಎಂ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ ಪುನ್ನಂಚಂದರ್ ಅವರ ತಮಗೆ ಬರುವ ಅಲ್ಪ ಸಂಬಳದಲ್ಲಿ ಕುಟುಂಬ ಜೀವನ ನಡೆಸಲಾಗದೆ, ಬಾಡಿಗೆ ಕಟ್ಟಲೂ ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ.

ಭರವಸೆಗಳನ್ನು ಮರೆತ ಅಧಿಕಾರಸ್ಥರು: ಪ್ರತ್ಯೇಕ ತೆಲಂಗಾಣ ರಾಜ್ಯವನ್ನು ನೋಡಿಯೇ ಸಾಯುತ್ತೇನೆ ಎಂದು ಭೂಪತಿ ಕೃಷ್ಣಮೂರ್ತಿ ಪ್ರತಿಜ್ಞೆ ಮಾಡಿದ್ದರು. 2014ರ ಜೂನ್ 2ರಂದು ಪ್ರತ್ಯೇಕ ರಾಜ್ಯ ರಚನೆಯಾದ ಬೆನ್ನಲ್ಲೇ 2015ರ ಫೆ. 15ರ ಮಧ್ಯರಾತ್ರಿ ಹೃದಯಾಘಾತದಿಂದ ಅವರು ನಿಧನ ಹೊಂದಿದರು. ಅಂದು ಅವರ ಆರ್ಥಿಕ ಸ್ಥಿತಿಯ ಬಗ್ಗೆ ಅರಿತ ಎಲ್ಲ ಮುಖಂಡರು ಎಲ್ಲ ರೀತಿಯಿಂದಲೂ ಬೆಂಬಲಿಸುವುದಾಗಿ ಭರವಸೆ ನೀಡಿದ್ದರು.

ಆದರೆ, ಭರವಸೆಗಳು ಭರವಸೆಗಲಾಗಿಯೇ ಉಳಿದವು. ಸರ್ಕಾರಿ ಗೌರವಗಳೊಂದಿಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರನಿಗೆ ವಿದಾಯ ಹೇಳಿದ ನಂತರ ಅವರಿಗೆ ನೀಡಿದ ಎಲ್ಲ ಭರವಸೆಗಳನ್ನು ನಮ್ಮ ಅಧಿಕಾರಸ್ಥರು ಮರೆತಿರುವುದು ಶೋಚನೀಯ.

ಭೂಪತಿ ಕೃಷ್ಣಮೂರ್ತಿ ಅವರು ಬದುಕಿದ್ದಾಗ ಪ್ರತ್ಯೇಕ ತೆಲಂಗಾಣ ರಾಜ್ಯ ಚಳವಳಿಗೆ ಸಲಹೆ ಕೇಳಿದವರು, ರಾಜ್ಯ ಆದಾಗ ಅದಕ್ಕೆ ಅವರೇ ಸ್ಫೂರ್ತಿ ಎಂದು ಹೊಗಳಿದವರು, ಅವರ ನಿಧನದ ನಂತರ ಅವರ ಕುಟುಂಬಕ್ಕೆ ಆಸರೆಯಾಗುತ್ತೇವೆ ಎಂದು ಭರವಸೆ ನೀಡಿದವರು ಈಗ ಆ ವಿಷಯವನ್ನೇ ಪ್ರಸ್ತಾಪಿಸುವುದಿಲ್ಲ.

ಬರೀ ಜಾಗ ಕೊಟ್ಟರೆ ಸಾಲದು: 2015ರಲ್ಲಿಯೇ ಸರ್ಕಾರ ಹನುಮಕೊಂಡ ಮೃಗಾಲಯದ ಎದುರು 250 ಯಾರ್ಡ್​ಗಳಷ್ಟು ಜಾಗ ಮಂಜೂರು ಮಾಡಿತ್ತು. ಈ ಜಾಗದ ಸುತ್ತ ಕನಿಷ್ಠ ಗೋಡೆ ನಿರ್ಮಿಸಲು ಕೂಡ ಕುಟುಂಬದ ಬಳಿ ಹಣವಿರಲಿಲ್ಲ. ಇತ್ತೀಚೆಗೆ ಕೆಲವರು ಈ ಸ್ಥಳವನ್ನು ಒತ್ತುವರಿ ಮಾಡಿಕೊಳ್ಳಲು ಯತ್ನಿಸಿದಾಗ ಅಕ್ಕಪಕ್ಕದವರು, ಸ್ನೇಹಿತರಿಂದ ಒಂದಷ್ಟು ಹಣ ಸಂಗ್ರಹಿಸಿ ಬೇಲಿ ಹಾಕಿಕೊಂಡಿದ್ದಾರೆ.

ನೌಕರಿ ಕಾಯಂ ಮಾಡಿ:ಅಜ್ಜನ ತ್ಯಾಗದ ಗುರುತಾಗಿ ಸಿಕೆಎಂ ಕಾಲೇಜಿನಲ್ಲಿನ ತನ್ನ ತಾತ್ಕಾಲಿಕ ನೌಕರಿಯನ್ನು ಕಾಯಂ ಮಾಡುವಂತೆ ಮನವಿ ಮಾಡಿದರೂ ಜನಪ್ರತಿನಿಧಿಗಳು ಸ್ಪಂದಿಸಿಲ್ಲ ಎಂದು ಕೃಷ್ಣಮೂರ್ತಿ ಮೊಮ್ಮಗ ಭೂಪತಿ ಪುನ್ನಂಚಂದರ್ ಅಳಲು ತೋಡಿಕೊಂಡರು.

ಕುಟುಂಬಕ್ಕೆ ಆಸರೆ ನೀಡಲೇಬೇಕು: ''ತೆಲಂಗಾಣದ ಗಾಂಧಿ ಎಂದೇ ಖ್ಯಾತರಾಗಿರುವ ಭೂಪತಿ ಕೃಷ್ಣಮೂರ್ತಿ ಅವರ ಕುಟುಂಬಕ್ಕೆ ಸರಕಾರ ಆಸರೆಯಾಗಬೇಕು. ಸ್ವರಾಷ್ಟ್ರದ ಚಿಂತನೆಗಳನ್ನು ಬಿತ್ತರಿಸಿದ ಅವರ ಕುಟುಂಬ ಸಮಾಜದಲ್ಲಿ ಗೌರವಯುತ ಜೀವನ ನಡೆಸುವಂತಾಗಲು ರಾಜ್ಯ ಸರಕಾರ ಅವರಿಗೆ ಸ್ವಂತ ಮನೆ ನಿರ್ಮಿಸಿಕೊಡಬೇಕು. ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಎಲ್ಲ ರೀತಿಯಲ್ಲೂ ಬೆಂಬಲಿಸಬೇಕು" - ಅಂಪಶಯ್ಯ ನವೀನ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ

ABOUT THE AUTHOR

...view details