ವಿಜಯವಾಡ(ಆಂಧ್ರಪ್ರದೇಶ):ಮಹಿಳಾ ಉದ್ಯೋಗಿಗಳೇ ಪ್ರತಿಯೊಂದು ಕೆಲಸ ನಿರ್ವಹಿಸುವ ಆಂಧ್ರಪ್ರದೇಶದ ಚಂದ್ರಗಿರಿಯ ʻಮಹಿಳಾ ಚಾಲಿತ ರೈಲು ನಿಲ್ದಾಣ'ವು ಅತ್ಯಂತ ವಿಶೇಷವಾಗಿದೆ.
2018ರಲ್ಲಿ ದಕ್ಷಿಣ ಕೇಂದ್ರ ರೈಲ್ವೆಯು ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸಲು ನಾಲ್ಕು ರೈಲು ನಿಲ್ದಾಣಗಳನ್ನು ಸಂಪೂರ್ಣ ಪ್ರಮಾಣದಲ್ಲಿ ಮಹಿಳಾ ಉದ್ಯೋಗಿ ನಿಲ್ದಾಣಗಳಾಗಿ ಮಾರ್ಪಡಿಸಿದೆ. ಮಹಿಳಾ ಉದ್ಯೋಗಿಗಳೇ ಇಲ್ಲಿನ ಪ್ರತಿಯೊಂದು ಕೆಲಸಗಳನ್ನೂ ನಿಭಾಯಿಸುತ್ತಾರೆ.
ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಖಾತ್ರಿಪಡಿಸಿಕೊಳ್ಳಲು ಭಾರತೀಯ ರೈಲ್ವೆಯು ಎಲ್ಲಾ ಮಹಿಳಾ ಉದ್ಯೋಗಿಗಳಿರುವ ರೈಲ್ವೆ ನಿಲ್ದಾಣಗಳ ಪರಿಕಲ್ಪನೆ ಪರಿಚಯಿಸಿದೆ. ಈ ಹಿನ್ನೆಲೆಯಲ್ಲಿ ಚಿತ್ತೂರು ಜಿಲ್ಲೆಯ ಚಂದ್ರಗಿರಿ ನಿಲ್ದಾಣವನ್ನು ಆಂಧ್ರಪ್ರದೇಶದ ಮೊದಲ ಮಹಿಳಾ ರೈಲು ನಿಲ್ದಾಣವಾಗಿ ರೂಪುಗೊಳಿಸಲಾಗಿದೆ.
ರೈಲ್ವೇಯ ನಿರ್ಣಾಯಕ ಕಾರ್ಯಾಚರಣೆ ವಿಭಾಗದ ಜೊತೆಗೆ ಮಹಿಳೆಯರು ವಾಣಿಜ್ಯ ಮತ್ತು ಸಿಗ್ನಲಿಂಗ್ ವಿಭಾಗಗಳನ್ನೂ ಇಲ್ಲಿ ನಿರ್ವಹಿಸಬಲ್ಲರು. ಕಳೆದ ನಾಲ್ಕು ವರ್ಷಗಳಲ್ಲಿ ಸಿಬ್ಬಂದಿ ತಮ್ಮ ದಕ್ಷ ಕೆಲಸಕ್ಕಾಗಿ ಉನ್ನತಾಧಿಕಾರಿಗಳಿಂದ ಪ್ರಶಂಸೆ ಗಿಟ್ಟಿಸಿದ್ದಾರೆ.
ದಕ್ಷಿಣ ಕೇಂದ್ರ ರೈಲ್ವೆಯ ಗುಂತಕಲ್ ವಿಭಾಗದಲ್ಲಿರುವ ಚಂದ್ರಗಿರಿ ನಿಲ್ದಾಣವನ್ನು ಒಬ್ಬ ಸೂಪರಿಂಟೆಂಡೆಂಟ್, ಮೂವರು ಸಹಾಯಕ ಅಧೀಕ್ಷಕರು ಮತ್ತು ಸಹಾಯಕ ಸಿಬ್ಬಂದಿ ಸೇರಿದ ಹುದ್ದೆಗಳಲ್ಲಿರುವವರು ಇಲ್ಲಿ ಮಹಿಳೆಯರೇ ಆಗಿದ್ದಾರೆ. ನಿಲ್ದಾಣದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದರಿಂದ ಹಿಡಿದು ಪ್ರಯಾಣಿಕರ ಸುರಕ್ಷತೆ, ಸ್ಟೇಷನ್ ಮಾಸ್ಟರ್ ಪಾತ್ರ ಸೇರಿ ಎಲ್ಲ 14 ಇಲಾಖೆಗಳ ಉಸ್ತುವಾರಿ ಇಲ್ಲಿ ಮಹಿಳೆಯರದ್ದೇ ಆಗಿದೆ ಎನ್ನುವುದು ಗಮನಾರ್ಹ.
ಇದನ್ನೂ ಓದಿ:ಕುಟುಂಬಸ್ಥರೊಂದಿಗೆ ವೆಂಕಟೇಶ್ವರನ ದರ್ಶನ ಪಡೆದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ