ಜೈಪುರ(ರಾಜಸ್ಥಾನ):ಓದುವ ಹಂಬಲ, ಕಲಿಯಬೇಕೆಂಬ ಆಸಕ್ತಿ, ಛಲವಿದ್ದರೆ ಸಾಕು ವಯಸ್ಸು ಅಡ್ಡಿಯಾಗಲ್ಲ. ಸಾಧಿಸುವ ಅದಮ್ಯ ಗುರಿ ಹೊಂದಿರುವ ಇಲ್ಲೊಬ್ಬರು ವೃದ್ಧ 55 ಪ್ರಯತ್ನಗಳ ಬಳಿಕ 10ನೇ ತರಗತಿ ಪಾಸ್ ಆಗಿದ್ದಾರೆ. ಇದೀಗ 12ನೇ ತರಗತಿ ಪರೀಕ್ಷೆಗಾಗಿ ಹೆಸರು ದಾಖಲಿಸಿದ್ದಾರೆ.
ಜಲೋರ್ನ 77 ವರ್ಷದ ಹುಕ್ಕುಂದಾಸ್ ವೈಷ್ಣವ್ ನಿವೃತ್ತ ಸರ್ಕಾರಿ ನೌಕರ. ಇವರು 56ನೇ ಪ್ರಯತ್ನದಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಇದೀಗ 12ನೇ ತರಗತಿ ಪರೀಕ್ಷೆ ಬರೆಯಲು ಮುಂದಾಗಿದ್ದಾರೆ. ಈ ವಯಸ್ಸಿನಲ್ಲೂ ಅಧ್ಯಯನ ಮುಂದುವರೆಸಿರುವ ಇವರು ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.
ಇದನ್ನೂ ಓದಿ:ಸಮಂತಾ ಜೊತೆಗಿನ ಡಿವೋರ್ಸ್: ನಟ ನಾಗಚೈತನ್ಯ ಹೇಳಿದ್ದೇನು?
1945ರಲ್ಲಿ ಜಲೋರ್ನ ಸರ್ದಾರ್ಗಢ್ ಗ್ರಾಮದಲ್ಲಿ ಜನಿಸಿರುವ ಹುಕ್ಕುಂದಾಸ್, 1ರಿಂದ 8ನೇ ತರಗತಿಯವರೆಗೆ ಓದಿದ್ದಾರೆ. 1962ರಲ್ಲಿ ಮೊಕಲ್ಸರ್ನಲ್ಲಿ ಮೊದಲ ಸಲ 10ನೇ ತರಗತಿ ಪರೀಕ್ಷೆ ಬರೆದು, ಅನುತ್ತೀರ್ಣರಾಗಿದ್ದರು. ಈ ವೇಳೆ ಇವರ ಸ್ನೇಹಿತರು, 'ನೀನು 10ನೇ ತರಗತಿ ಪರೀಕ್ಷೆಯಲ್ಲಿ ಪಾಸ್ ಆಗುವುದಿಲ್ಲ' ಎಂದು ಸವಾಲು ಹಾಕಿದ್ದರು. ಈ ಸವಾಲು ಸ್ವೀಕರಿಸಿದ ಹುಕ್ಕುಂದಾಸ್, 10ನೇ ತರಗತಿ ಪರೀಕ್ಷೆಯಲ್ಲಿ ಪಾಸ್ ಆಗುವುದಾಗಿ ಹೇಳಿದ್ದರು.
2010ರವರೆಗೆ 10ನೇ ತರಗತಿ ಪರೀಕ್ಷೆಗೆ 48 ಸಲ ಕುಳಿತುಕೊಂಡಿರುವ ಇವರು ಫೇಲ್ ಆಗಿದ್ದರು. ಆದರೆ, 2019ರಲ್ಲಿ ಪರೀಕ್ಷೆ ಬರೆದು ದ್ವಿತೀಯ ದರ್ಜೆಯೊಂದಿಗೆ ಪಾಸ್ ಆಗಿದ್ದರು. ಇದರ ಬೆನ್ನಲ್ಲೇ 2021-22ರಲ್ಲಿ 12ನೇ ತರಗತಿಗೆ ದಾಖಲಾಗಿದ್ದು, ಇದೀಗ ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ.
ವಿಶೇಷವೆಂದರೆ, ಇವರ ಮೊಮ್ಮಗ ಈಗಾಗಲೇ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಹುಕುಂದಾಸ್ ವೈಷ್ಣವ್ 4ನೇ ತರಗತಿ ಪಾಸ್ ಆಗಿದ್ದಕ್ಕಾಗಿ ನೀರಾವರಿ ಇಲಾಖೆಯಲ್ಲಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದರು. 2005ರಲ್ಲಿ ನಿವೃತ್ತರಾಗಿದ್ದಾರೆ.