ಎರ್ನಾಕುಲಂ(ಕೇರಳ):ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ರಾಜತಾಂತ್ರಿಕ ಬ್ಯಾಗ್ (ಡಿಪ್ಲೊಮ್ಯಾಟಿಕ್ ಬ್ಯಾಗೇಜ್) ಮೂಲಕ ಚಿನ್ನ ಕಳ್ಳ ಸಾಗಣೆ ಮಾಡಿದ ಪ್ರಕರಣ ಸಂಬಂಧ ಕಸ್ಟಮ್ಸ್ ಅಧಿಕಾರಿಗಳು ಆರೋಪಿಗಳಿಗೆ ಭಾರಿ ಮೊತ್ತದ ದಂಡ ವಿಧಿಸಿದ್ದಾರೆ. ಯುಎಇ ದೂತಾವಾಸದ ಇಬ್ಬರು ಮಾಜಿ ರಾಜತಾಂತ್ರಿಕರು ಸಹ ದಂಡವನ್ನು ಪಾವತಿಸಬೇಕು ಎಂದು ಕಸ್ಟಮ್ಸ್ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
44 ಆರೋಪಿಗಳಿಗೆ ಒಟ್ಟು 66.65 ಕೋಟಿ ರೂ.ಗಳ ದಂಡ ವಿಧಿಸಲಾಗಿದೆ. ಇದರಲ್ಲಿ ಸ್ವಪ್ನಾ ಸುರೇಶ್, ಪಿ.ಎಸ್. ಸರಿತ್, ಸಂದೀಪ್ ನಾಯರ್, ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್ ಮತ್ತು ಕೆ.ಟಿ. ರಮೀಸ್ ಸೇರಿದ್ದಾರೆ. ಯುಎಇ ದೂತಾವಾಸದ ಒಬ್ಬ ಕಾನ್ಸುಲ್ ಜನರಲ್ ಮತ್ತು ಮಾಜಿ ಅಡ್ಮಿನ್ ಅಟಾಚೆ ಕೂಡ ತಲಾ 6 ಕೋಟಿ ರೂ.ಗಳ ದಂಡವನ್ನು ಪಾವತಿಸಬೇಕಾಗಿದೆ. ಯುಎಇ ದೂತಾವಾಸದ ಮಾಜಿ ಕಾನ್ಸುಲ್ ಜನರಲ್ ಜಮಾಲ್ ಹುಸೇನ್ ಅಲ್ಜಾಬಿ ಮತ್ತು ಮಾಜಿ ಅಡ್ಮಿನ್ ಅಟಾಚೆ ರಶೀದ್ ಖಮಿಸ್ ಅಲ್ ಅಶ್ಮಿ ವಿರುದ್ಧ ಸಹ ಪ್ರಕರಣ ದಾಖಲಿಸಲಾಗಿತ್ತು.
ಕೊಚ್ಚಿ ವಿಭಾಗೀಯ ಕಸ್ಟಮ್ಸ್ ಪ್ರಿವೆಂಟಿವ್ ಕಮಿಷನರ್ ರಾಜೇಂದ್ರ ಕುಮಾರ್ ಈ ಆದೇಶ ಹೊರಡಿದ್ದು, ಆರೋಪಿಗಳಾದ ಸ್ವಪ್ನಾ ಸುರೇಶ್, ಪಿ.ಎಸ್. ಸರಿತ್, ಸಂದೀಪ್ ನಾಯರ್ ಮತ್ತು ಕೆ.ಟಿ. ರಮೀಸ್ ತಲಾ 6 ಕೋಟಿ ರೂ. ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಶಿವಶಂಕರ್ ಅವರಿಗೆ 50 ಲಕ್ಷ ರೂ. ಕಪಿತಾನ್ ಏಜೆನ್ಸಿ 4 ಕೋಟಿ ರೂ.ಗಳನ್ನು ಪಾವತಿಸಬೇಕಾಗಿದೆ. ಫೈಸಲ್ ಫರೀದ್, ಪಿ.ಮುಹಮ್ಮದ್ ಶಫಿ, ಇ.ಸೀತಲವಿ ಮತ್ತು ಟಿ.ಎಂ. ಸಂಜು ಅವರಿಗೆ ತಲಾ 2.5 ಕೋಟಿ ರೂ.ಗಳ ದಂಡ ವಿಧಿಸಲಾಗಿದೆ. ಸ್ವಪ್ನಾ ಸುರೇಶ್ ಅವರ ಪತಿ ಎಸ್.ಜಯಶಂಕರ್ ಮತ್ತು ರಾಬಿನ್ ಶಮೀದ್ಗೆ ತಲಾ 2 ಕೋಟಿ ರೂ., ಜಲಾಲ್, ಪಿ.ಟಿ.ಅಬ್ದು, ಟಿ.ಎಂ.ಮುಹಮ್ಮದ್ ಅನ್ವರ್, ಪಿ.ಟಿ.ಅಹ್ಮದ್ ಕುಟ್ಟಿ ಮತ್ತು ಮೊಹಮ್ಮದ್ ಮನ್ಸೂರ್ ಅವರಿಗೆ ತಲಾ 1.5 ಕೋಟಿ ರೂ., ಮೊಹಮ್ಮದ್ ಶಮೀಮ್ಗೆ 1 ಕೋಟಿ ರೂ. ಇತರ ಆರೋಪಿಗಳಿಗೆ 2 ಲಕ್ಷದಿಂದ 50 ಲಕ್ಷ ರೂ.ಗಳವರೆಗೆ ದಂಡ ವಿಧಿಸಲಾಗಿದೆ.