ತಿರುವನಂತಪುರಂ (ಕೇರಳ) : ದಕ್ಷಿಣ ತಮಿಳುನಾಡು ಮತ್ತು ಕೇರಳ ತೀರಗಳಿಗೆ ಬುರೆವಿ ಚಂಡಮಾರುತ ಅಪ್ಪಳಿಸುವ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ತಿರುವನಂತಪುರಂ ಜಿಲ್ಲಾ ಅಧಿಕಾರಿಗಳು ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ.
ಬಂಗಾಳಕೊಲ್ಲಿಯಲ್ಲಿನ ಕಡಿಮೆ ಒತ್ತಡದ ಪ್ರದೇಶವು ಚಂಡಮಾರುತವಾಗಿ ಬದಲಾಗಬಹುದು ಎಂದು ಹವಾಮಾನ ಇಲಾಖೆಯ ಎಚ್ಚರಿಕೆ ನೀಡಿದ್ದು, ತಿರುವನಂತಪುರಂ ಜಿಲ್ಲೆಯಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತುರ್ತು ಪರಿಹಾರ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗಿದೆ. ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸೈನ್ಯ, ನೌಕಾಪಡೆ, ವಾಯುಪಡೆ ಮತ್ತು ಎನ್‌ಡಿಆರ್‌ಎಫ್ ಪಡೆ ಸಿದ್ಧವಾಗಿವೆ.
ದಕ್ಷಿಣ ತಮಿಳುನಾಡು, ಪುದುಚೇರಿ, ಕಾರೈಕಲ್, ದಕ್ಷಿಣ-ಉತ್ತರ ಕೇರಳ, ಮಹೇ, ಆಂಧ್ರಪ್ರದೇಶದ ದಕ್ಷಿಣ ಕರಾವಳಿ ಮತ್ತು ಲಕ್ಷದ್ವೀಪಗಳಲ್ಲಿ ಡಿಸೆಂಬರ್ 4 ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಅಲ್ಲದೆ ಡಿ.4 ರವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ಮುಂದಿನ 12 ಗಂಟೆಗಳಲ್ಲಿ ಚಂಡಮಾರುತದ ವೇಗ ತೀವ್ರಗೊಳ್ಳುವ ಸಾಧ್ಯತೆಯಿದ್ದು, ಡಿಸೆಂಬರ್ 2 ರಂದು ರಾತ್ರಿ ಅಥವಾ ಸಂಜೆ ವೇಳೆಗೆ ಗಂಟೆಗೆ 75-85 ಕಿ.ಮೀ ವೇಗದೊಂದಿಗೆ ಶ್ರೀಲಂಕಾ ಕರಾವಳಿ ಪ್ರದೇಶ ತ್ರೀನ್ಕೊಮಾಲಿ ದಾಟುವ ಸಾಧ್ಯತೆಯಿರುವುದಾಗಿ ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಡಿಸೆಂಬರ್ 3 ರಂದು ಬೆಳಗ್ಗೆ ಮನ್ನಾರ್ ಕೊಲ್ಲಿ ಮತ್ತು ಕೊಮೊರಿನ್ ಪ್ರದೇಶದಲ್ಲಿ ಹೊರಹೊಮ್ಮಲಿದ್ದು, ಡಿಸೆಂಬರ್ 4 ರಂದು ಕನ್ಯಾಕುಮಾರಿ ಮತ್ತು ಪಂಬನ್ ನಡುವೆ ದಕ್ಷಿಣ ತಮಿಳುನಾಡು ಕರಾವಳಿ ಪ್ರದೇಶದತ್ತ ಚಲಿಸಲಿದೆ ಎಂದು ಮಾಹಿತಿ ನೀಡಲಾಗಿದೆ.