ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಕೋಲಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಾಹದ ಹೆಸರಲ್ಲಿ ಬರೋಬ್ಬರಿ 13 ಮಂದಿ ಮೋಸಹೋಗಿರುವ ಘಟನೆ ನಡೆದಿದೆ. ಒಂದೇ ಹುಡುಗಿಯನ್ನು 13 ಜನರಿಗೆ ತೋರಿಸಿ ಮಹಾಮೋಸ ಎಸಗಿರುವ ಪ್ರಕರಣ ದಾಖಲಾಗಿದೆ.
ಈ 13 ಯುವಕರನ್ನು ಮದುವೆಯಾಗುವುದಾಗಿ ನಂಬಿಸಿ ಅವರಿಂದ ಲಕ್ಷಾಂತರ ರೂ. ತೆಗೆದುಕೊಂಡು ಗ್ಯಾಂಗ್ವೊಂದು ಪರಾರಿಯಾಗಿದೆ. ಇನ್ನು ಈ ಬಗ್ಗೆ ಮಾತನಾಡಿದ ಎಸ್‌ಪಿ ಸಾಯಿ ಕೃಷ್ಣ, "ಇಂಥ ದೂರುಗಳು ನಿರಂತರವಾಗಿ ನಮ್ಮ ಬಳಿಗೆ ಬರುತ್ತಿವೆ." ಎಂದು ಹೇಳಿದರು. ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಘಟನೆ ವಿವರ:ಮದುವೆಯಾಗಲು ಸಿದ್ಧ ಇರುವವರನ್ನು ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ವಂಚಕರ ಗ್ಯಾಂಗ್ ಗುರುತಿಸಿದ್ದಾರೆ. ಈ ಬಳಿಕ ಯುವಕರಿಗೆ ಉತ್ತಮ ಹುಡುಗಿಯನ್ನು ತೋರಿಸುವುದಾಗಿ ಹೇಳಿ ನಂಬಿಸಿದ್ದಾರೆ. ಇವರ ಮಾತನ್ನು ನಂಬಿದ ಯುವಕರು ಮದುವೆಯಾಗಲು ಒಪ್ಪಿಕೊಂಡಿದ್ದಾರೆ. ಇನ್ನು ಸುಮಾರು 13 ಮಂದಿಗೆ ಒಬ್ಬಳೇ ಮಹಿಳೆಯ ಫೋಟೋ ತೋರಿಸಲಾಗಿದೆ. ಈಕೆಯನ್ನು ಮದುವೆಯಾಗಲು ಒಪ್ಪಿದ ಯುವಕರಿಗೆ ಸ್ವಲ್ಪ ಹಣ ಜಮೆ ಮಾಡುವಂತೆ ತಿಳಿಸಲಾಗಿದೆ. ಹೀಗೆ ಆರೋಪಿಗಳು ಸುಮಾರು ಎರಡೂವರೆ ಲಕ್ಷ ರೂಪಾಯಿಗಳಷ್ಟು ಹಣ ಪಡೆದಿದ್ದಾರೆ.
ಹಣ ನೀಡಿದ ಯುವಕರು ಹೆಣ್ಣು ಹಾಗೂ ಮದುವೆಯ ಬಗ್ಗೆ ಮಾಹಿತಿ ಕಲೆ ಹಾಕಬೇಕು ಎಂದು ಕರೆ ಮಾಡಿದಾಗ ಫೋನ್ ಸ್ವಿಚ್ಡ್ ಆಫ್ ಆಗಿದೆ. ಇದರಿಂದ ಗಾಬರಿಯಾದ ಯುವಕರು ಏನಾಯ್ತೆಂದು ನೋಡಲು ಮ್ಯಾಟ್ರಿಮೋನಿಯಲ್ ಕಚೇರಿಗೆ ಆಗಮಿಸಿದ್ದಾರೆ. ಆದರೆ, ಈ ವೇಳೆಗಾಗಲೇ ಗ್ಯಾಂಗ್ ಅಲ್ಲಿಂದ ಕಾಣೆಯಾಗಿದೆ. ನಂತರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿ 3 ಜನ ಆರೋಪಿಗಳನ್ನ ಗುರುತಿಸಿದ್ದಾರೆ.
ಇನ್ನು ಈ ಮೋಸಕ್ಕೆ ಬಲಿಯಾದವರಲ್ಲಿ ಗ್ವಾಲಿಯರ್ ಮತ್ತು ಚಂಬಲ್ ಭಾಗದವರೇ ಹೆಚ್ಚು. ಇವರ ದೂರಿನ ಮೇರೆಗೆ ಪೊಲೀಸರು ಮೊದಲು ತನಿಖೆ ನಡೆಸಿದ್ದಾರೆ. ನಂತರ ಎಫ್‌ಐಆರ್ ದಾಖಲಿಸಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.