ಪಾಟ್ನಾ (ಬಿಹಾರ): ಮುಂಗಾರು ಅಧಿವೇಶನದ ಮೂರನೇ ದಿನವೂ ಬಿಹಾರ ವಿಧಾನಸಭೆಯಲ್ಲಿ ಕೋಲಾಹಲ ಉಂಟಾಯಿತು. ತೇಜಸ್ವಿ ಯಾದವ್ ರಾಜೀನಾಮೆಗೆ ಪ್ರತಿಪಕ್ಷದವರು ಪಟ್ಟು ಹಿಡಿದರು. ಬುಧವಾರ ಸದನದ ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಶಾಸಕರು ಮತ್ತೊಮ್ಮೆ ಕುರ್ಚಿಗಳನ್ನು ತೂರಾಡಿದರು. ಅಗ್ವಾನಿ ಸೇತುವೆ ಕುಸಿತದ ತನಿಖೆಯ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ಸಚಿವ ತೇಜಸ್ವಿ ಯಾದವ್ ಉತ್ತರಿಸಿದರು. ಈ ವೇಳೆ, ಬಿಜೆಪಿ ಶಾಸಕರ ಗದ್ದಲ ಮುಂದುವರಿಯಿತು. ಸ್ಪೀಕರ್ ಸದನದ ಕಲಾಪವನ್ನು ನಾಳೆಗೆ ಮುಂದೂಡಿದರು.
ತೇಜಸ್ವಿ ರಾಜೀನಾಮೆಗೆ ಬಿಜೆಪಿ ಪಟ್ಟು:ಇಂದು ಸದನದ ಕಲಾಪ ಆರಂಭವಾದಾಗ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಉತ್ತರಿಸಲು ಎದ್ದು ನಿಂತರು. ಈ ವೇಳೆ, ಬಿಜೆಪಿ ಶಾಸಕರು ತೇಜಸ್ವಿ ಅವರನ್ನು ವಿರೋಧಿಸಿ ಗಲಾಟೆ ಆರಂಭಿಸಿದರು. ಬಿಜೆಪಿ ಶಾಸಕರು ಮತ್ತೊಮ್ಮೆ ಸದನದಲ್ಲಿ ಕುರ್ಚಿ ತೂರಾಡಿದರು. ಸದನದ ಬಾವಿಗಿಳಿದು ಪೋಸ್ಟರ್ ಎಸೆದರು. ಬಳಿಕ ಪೋಸ್ಟರ್ ತೆಗೆಯುವಂತೆ ಸ್ಪೀಕರ್ ಮಾರ್ಷಲ್ಗಳಿಗೆ ಆದೇಶಿಸಿದರು.
ಸದನ ನಾಳೆಗೆ ಮುಂದೂಡಿಕೆ:ಬಿಜೆಪಿ ಗದ್ದಲದ ನಂತರ ಸದನದಲ್ಲಿ ಪೀಠ ಏರಿದ ಬಿಜೆಪಿ ಸದಸ್ಯರಿಗೆ ಸ್ಪೀಕರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಇಂತಹ ವರ್ತನೆ ಸರಿಯಲ್ಲ ಎಂದು ಸ್ಪೀಕರ್ ಹೇಳಿದರು. ನೀವು ನಿಮ್ಮ ಸ್ಥಳಗಳಲ್ಲಿ ಕುಳಿತುಕೊಳ್ಳದಿದ್ದರೆ, ನಾವು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದರು. ಇಷ್ಟಾದರೂ ಬಿಜೆಪಿ ಶಾಸಕ ಸುಮ್ಮನಿರಲಿಲ್ಲ. ಗದ್ದಲವನ್ನು ಕಂಡ ಸ್ಪೀಕರ್ ಸದನದ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿದರು.