ನವದೆಹಲಿ :ಭಾರತದಲ್ಲಿ ಕೋವಿಡ್ ಮೂರನೇ ಅಲೆಯು ಹೆಚ್ಚಾಗಿ ಯುವಕರಲ್ಲಿ ಕಾಣಿಸಿಕೊಳ್ಳುತ್ತಿದೆ. ಅವರಲ್ಲಿನ ಕೋವಿಡ್ ಸೋಂಕಿನ ಲಕ್ಷಣಗಳು ಸೌಮ್ಯವಾಗಿವೆ. ಆ ಕೋವಿಡ್ ಸೋಂಕಿತರಲ್ಲಿ ಬೇರೆ ಬೇರೆ ಅನಾರೋಗ್ಯವೂ ಹೆಚ್ಚಾಗಿಯೇ ಕಾಣಿಸಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ(ಐಸಿಎಂಆರ್) ಮುಖ್ಯಸ್ಥ ಡಾ.ಬಲರಾಮ್ ಭಾರ್ಗವ ಈ ಕುರಿತು ಮಾಹಿತಿ ನೀಡಿದ್ದು, ಮೂರನೇ ಅಲೆಯ ವೇಳೆ ಆಸ್ಪತ್ರೆಗೆ ದಾಖಲಾದ ಕೋವಿಡ್ ರೋಗಿಗಳ ಸರಾಸರಿ ವಯಸ್ಸು 44 ವರ್ಷಗಳಾಗಿದೆ. ಅವರಲ್ಲಿ ಶೇ.46ರಷ್ಟು ಮಂದಿಯಲ್ಲಿ ಬೇರೆ ಬೇರೆ ರೀತಿಯ ಅಸ್ವಸ್ಥತೆ ಕಾಣಿಸಿದೆ ಎಂದು ಬಲರಾಮ್ ಭಾರ್ಗವ್ ಹೇಳಿದ್ದಾರೆ.
ಮೊದಲ ಮತ್ತು ಎರಡನೇ ಅಲೆಯ ವೇಳೆಯಲ್ಲಿ ನ್ಯಾಷನಲ್ ಕೋವಿಡ್ ರಿಜಿಸ್ಟ್ರಿಯ ಭಾಗವಾಗಿ ಪ್ಲಾಸ್ಮಾ ಅಧ್ಯಯನ ಮಾಡಲ್ಪಟ್ಟ 37 ಆಸ್ಪತ್ರೆಗಳಿಂದ ಮಾಹಿತಿ ಸಂಗ್ರಹಿಸಿರುವ ಐಸಿಎಂಆರ್ ಆ ಮಾಹಿತಿಯನ್ನು ವಿಶ್ಲೇಷಣೆಗೆ ಒಳಪಡಿಸಿತ್ತು.
ಈ ಹಿಂದಿನ ಬಾರಿ ಕೋವಿಡ್ ಸೋಂಕಿತರಲ್ಲಿ ಬೇರೆ ಬೇರೆ ರೀತಿಯ ಅನಾರೋಗ್ಯ ಶೇಕಡಾ 66ರಷ್ಟಿದ್ದರೆ, ಮೂರನೇ ಅಲೆಯಲ್ಲಿ ಕೋವಿಡ್ ಅಲ್ಲದ ಬೇರೆ ಬೇರೆ ರೀತಿಯ ಅನಾರೋಗ್ಯ ಶೇಕಡಾ 46ರಷ್ಟು ಇದೆ ಎಂದು ಕಂಡುಬಂದಿದೆ.
ಇದನ್ನೂ ಓದಿ:ಬಿಹಾರದಲ್ಲಿ ಸವಾಲಾಗುತ್ತಿದೆ ಕ್ಯಾಚ್ ಮ್ಯಾರೇಜ್ : ಇಲ್ಲಿದೆ ಸಂಪೂರ್ಣ ವಿವರ!
ಈ ಮೊದಲು ಕೋವಿಡ್ ಅಲ್ಲದೇ ಬೇರೆ ಬೇರೆ ಸಮಸ್ಯೆಗಳಿಂದ ಬಳಲುತ್ತಿರುವವರ ಸರಾಸರಿ ವಯಸ್ಸು 56 ಇದ್ದರೆ, ಈಗ ಮೂರನೇ ಅಲೆಯಲ್ಲಿ ಅವರ ಸರಾಸರಿ ವಯಸ್ಸು 44 ವರ್ಷಗಳಿವೆ ಎಂದು ಐಸಿಎಂಆರ್ ವಿಶ್ಲೇಷಣೆಗೆ ಒಳಪಡಿಸಿದ ಮಾಹಿತಿಯಲ್ಲಿ ದೃಢಪಟ್ಟಿದೆ.
ಒಮಿಕ್ರಾನ್ ರೂಪಾಂತರದಿಂದ ಸಾವನ್ನಪ್ಪಿದವರ ಪೈಕಿ ಶೇಕಡಾ 10ರಷ್ಟು ಮಂದಿ ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡಿದ್ದರು. ಉಳಿದ 90ರಷ್ಟು ಮಂದಿ ಕೋವಿಡ್ ಲಸಿಕೆ ಹಾಕಿಸಿಕೊಂಡಿರಲಿಲ್ಲ ಎಂದು ತಿಳಿದುಬಂದಿದೆ. ಆದ್ದರಿಂದ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಸಾವಿನಿಂದ ಪಾರಾಗಬಹುದು ಎಂಬುದು ತಜ್ಞರ ಅಭಿಮತ.