ಜೈಪುರ (ರಾಜಸ್ಥಾನ): ಖದೀಮರಿಗೆ ಕಳ್ಳತನ ಮಾಡಲು ಯಾರ ಮನೆಯಾದರೇನು?. ಕಳವು ಮಾಡುವಾಗ ಅವರ ಕೈಗೆ ಬೆಲೆಬಾಳುವ ವಸ್ತುಗಳು ಸಿಕ್ಕರೆ ಸಾಕು. ಹೌದು, ಇಂತಹದ್ದೇ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಸಂಸದರೊಬ್ಬರ ಮನೆಗೆ ಕಳ್ಳರು ಕನ್ನ ಹಾಕಿ ಅಪಾರ ಪ್ರಮಾಣದ ನಗ ಮತ್ತು ನಾಣ್ಯ ದೋಚಿದ್ದಾರೆ. ಅಚ್ಚರಿಯ ವಿಷಯ ಎಂದರೆ ಸಂಸದರ ಮನೆಯಿಂದ ಕೇವಲ 100 ಮೀಟರ್ ದೂರದಲ್ಲೇ ಪೊಲೀಸ್ ಠಾಣೆ ಇದೆಯಂತೆ!.
ಇದನ್ನೂ ಓದಿ:ಗಿರವಿ ಇರಿಸಿದ್ದ ಚಿನ್ನದೊಂದಿಗೆ ಪರಾರಿಯಾಗಿದ್ದ ಅಂಗಡಿ ಮಾಲೀಕನ ಬಂಧನ
ಜೈಪುರದಲ್ಲಿರುವ ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷದ (ಆರ್‌ಎಲ್‌ಪಿ) ಮುಖ್ಯಸ್ಥ ಮತ್ತು ನಾಗೌರ್ ಸಂಸದ ಹನುಮಾನ್ ಬೇನಿವಾಲ್ ಅವರ ನಿವಾಸದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಮನೆಗೆ ನುಗ್ಗಿ ನಗದು, ಚಿನ್ನ ಮತ್ತು ಬೆಳ್ಳಿ ಆಭರಣಗಳು ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಎಂಪಿ ಬೇನಿವಾಲ್ ಅವರೇ ತಮ್ಮ ಟ್ವಿಟರ್ ಖ್ಯಾತೆನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಶುಕ್ರವಾರ ಬೆಳಗ್ಗೆ ಜಲುಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಸಂಸದರ ಮನೆಯಲ್ಲಿ ಏನೆಲ್ಲ ಕಳವು?: ಸಂಸದರ ದೂರಿನ ಪ್ರಕಾರವೇ ಬೆಲೆಬಾಳುವ ಪುರಾತನ ವಸ್ತುಗಳು, ಚಿನ್ನಾಭರಣ ಮತ್ತು ನಗದು ಕಳ್ಳತನವಾಗಿದೆ. ಕಳ್ಳರು ಮನೆಗೆ ನುಗ್ಗಿ 1.5 ಲಕ್ಷ ರೂ. ನಗದು, ನಾಲ್ಕು ಚಿನ್ನದ ಬಳೆಗಳು, ನಾಲ್ಕು ಉಂಗುರಗಳು, ಬೆಳ್ಳಿ ನಾಣ್ಯಗಳು, ಪುರಾತನ ವಸ್ತುಗಳು ಮತ್ತು ಅಡುಗೆ ಮನೆಯ ವಸ್ತುಗಳನ್ನೂ ಖದೀಮರು ಕದ್ದೊಯ್ದಿದ್ದಾರೆ ಎಂದು ಬೇನಿವಾಲ್ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.
ಜನ ಸಾಮಾನ್ಯರ ಗತಿಯೇನು?: ಇದೇ ವೇಳೆ ಮನೆಯಲ್ಲಿ ಕಳ್ಳತನವಾದ ನಂತರ ಪೊಲೀಸ್ ಇಲಾಖೆಯ ದಕ್ಷತೆ ಬಗ್ಗೆಯೂ ಸಂಸದ ಬೇನಿವಾಲ್ ಪ್ರಶ್ನೆ ಎತ್ತಿದ್ದಾರೆ. ನಮ್ಮ ಮನೆಯು ಪೊಲೀಸ್ ಠಾಣೆಯಿಂದ 100 ಮೀಟರ್ ದೂರದಲ್ಲಿದೆ. ಜೈಪುರ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಸಂಸದರ ಮನೆಯಲ್ಲೇ ಕಳ್ಳತನ ಆಗುತ್ತಿದೆ. ಇನ್ನೂ ಜನಸಾಮಾನ್ಯರ ಗತಿಯೇನು ಕಿಡಿಕಾರಿದ್ದಾರೆ.