ನವದೆಹಲಿ:ರಾಜಧಾನಿ ದೆಹಲಿಯಲ್ಲಿ ಕಳ್ಳತನದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಕಳ್ಳರು ರೋಹಿಣಿ ಪ್ರದೇಶದ ಎಂಜಿನಿಯರ್ ಮನೆಗೆ ಕಳ್ಳತನ ಮಾಡಲು ಪ್ರವೇಶಿಸಿದ್ದರು. ಆದರೆ, ಮನೆಯಲ್ಲಿ ಬೆಲೆಬಾಳುವ ವಸ್ತುಗಳು ಸಿಗದಿದ್ದಾಗ ಕಳ್ಳರು ಹಿಂತಿರುಗುತ್ತಿದ್ದರು. ಹೊರಡುವ ಮುನ್ನ ಸಂತ್ರಸ್ತನ ಮನೆ ಬಾಗಿಲಿಗೆ 500 ರೂಪಾಯಿಯ ನೋಟು ಇಟ್ಟು ತೆರಳಿದ್ದಾರೆ. ಈ ಘಟನೆ ನಡೆದಾಗ ಎಂಜಿನಿಯರ್ ಮನೆಯಲ್ಲಿ ಇರಲಿಲ್ಲ. ಅವರು ಮನಗೆ ಹಿಂತಿರುಗಿ ನೋಡಿದಾಗ ಬೀಗ ಒಡೆದಿರುವುದು ಕಂಡು ಬಂದರೂ ಸಹ ಮನೆಯಲ್ಲಿರುವ ಒಂದೇ ಒಂದು ವಸ್ತು ಸಹ ಕಾಣೆಯಾಗಿರಲಿಲ್ಲ.
ರೋಹಿಣಿ ಪ್ರದೇಶದಲ್ಲಿ ವಾಸಿಸುತ್ತಿರುವ ನಿವೃತ್ತ ಎಂಜಿನಿಯರ್ ರಾಮಕೃಷ್ಣ ಅವರು ಜುಲೈ 19 ರಂದು ಸಂಜೆ ಗುರುಗ್ರಾಮ್‌ನಲ್ಲಿರುವ ತಮ್ಮ ಮಗನ ಮನೆಗೆ ಹೋಗಿದ್ದರು. ಅವರು ತಮ್ಮ ಜೊತೆ ಪತ್ನಿಯನ್ನು ಸಹ ಕರೆದುಕೊಂಡು ಹೋಗಿದ್ದರು. ಜುಲೈ 21 ರಂದು ಬೆಳಗ್ಗೆ ಅವರ ನೆರೆಹೊರೆಯವರು ಕರೆ ಮಾಡಿ ಮನೆ ಕಳ್ಳತನವಾಗಿದೆ ಎಂದು ತಿಳಿಸಿದರು. ಮನೆಗೆ ಹಿಂತಿರುಗಿ ನೋಡಿದಾಗ ಮನೆಯ ಮುಖ್ಯ ಬಾಗಿಲಿನ ಬೀಗ ಮುರಿದಿರುವುದು ಕಂಡು ಬಂದಿದೆ. ಮನೆಯೊಳಗೆ ಹೋಗಿ ನೋಡಿದಾಗ ಕಳ್ಳರು ಮನೆಯೊಳಗಿಂದ ಒಂದು ವಸ್ತವೂ ಸಹ ತೆಗೆದುಕೊಂಡು ಹೋಗದಿರುವುದು ಕಂಡುಬಂದಿದೆ.
ಸಂತ್ರಸ್ತ ರಾಮಕೃಷ್ಣ ಪ್ರಕರಣದ ಕುರಿತು ದೂರು ದಾಖಲಿಸಲು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಕಳ್ಳರು ಮನೆಗೆ ನುಗ್ಗಿದ್ದಾರೆ. ಆದರೆ ಏನೂ ಕಳ್ಳತನವಾಗಿಲ್ಲ ಎಂದು ಅವರು ಹೇಳಿದ್ದಾರೆ. ಮನೆಯ ಮುಖ್ಯ ಬಾಗಿಲಲ್ಲಿ 500 ರೂಪಾಯಿ ನೋಟು ಕೂಡ ಸಿಕ್ಕಿದೆ. ಮನೆಯ ವಾರ್ಡ್ ರೋಬ್ ಹಾಳು ಮಾಡಿಲ್ಲ ಎಂದು ಪೊಲೀಸರಿಗೆ ಕಳ್ಳತನದ ಮಾಹಿತಿ ನೀಡಿದ್ದಾರೆ.